ಮಂಗಳೂರು: ಸುಮಾರು ಒಂದು ವರ್ಷ ಒಂಬತ್ತು ತಿಂಗಳ ಹಿಂದೆ ಕಳವಾಗಿದ್ದ ಬೈಕೊಂದು ಮತ್ತೆ ಅದರ ಮಾಲಕನಿಗೇ ಕಾಣಸಿಗುವ ಮೂಲಕ ಅವರ ಮುಖದಲ್ಲಿ ಹರ್ಷಕ್ಕೆ ಕಾರಣವಾಗಿದೆ.
ಮಂಗಳೂರಿನ ಹಸುರು ದಳ ಎನ್‌ಜಿಒ ಸಂಸ್ಥೆಯ ಸದಸ್ಯರಾಗಿರುವ ನಾಗರಾಜ್ ಬಜಾಲ್ ಅವರೇ ಪತ್ತೆಯಾದ ಬೈಕ್‌ನ ಮಾಲಕ.
2022ರ ಮಾರ್ಚ್‌ನಲ್ಲಿ ಹಂಪನಕಟ್ಟೆಯ ರೂಪಾ ಹೊಟೇಲ್ ಬಳಿ ಪಾರ್ಕ್ ಮಾಡಿದ್ದ ಅವರ ಬಜಾಜ್ ಅವೆಂಜರ್ ಬೈಕ್ ಕಳುವಾಗಿತ್ತು. ಈ ಬಗ್ಗೆ ಬಂದರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸಿಸಿ ಕೆಮರಾ ಪರಿಶೀಲಿಸಿದಾಗ ಯುವಕನೊಬ್ಬ ಬೈಕ್ ಕಳವು ಮಾಡುವ ದೃಶ್ಯ ಸೆರೆಯಾಗಿತ್ತು. ಆದರೆ ಅನಂತರದ ದಿನಗಳಲ್ಲಿ ಬೈಕ್ ಮಾತ್ರ ಪತ್ತೆಯಾಗಿರಲಿಲ್ಲ.
ಅ. 9ರಂದು ಕಾರ್ಯನಿಮಿತ್ತ ನಾಗರಾಜ್ ಅವರು ಬಿಜೈನ ಜಯಲಕ್ಷ್ಮೀ ಮಳಿಗೆಯ ಬಳಿ ಸಂಚರಿಸುತ್ತಿದ್ದಾಗ ನಾಪತ್ತೆಯಾಗಿದ್ದ ಅವರ ಬೈಕ್ ರಸ್ತೆಯಲ್ಲಿ ಕಣ್ಣ ಮುಂದೆ ಹಾದು ಹೋಗಿದೆ. ತತ್‌ಕ್ಷಣ ಅದನ್ನು ಬೆನ್ನಟ್ಟಿದ ಅವರು ಬಂಟ್ಸ್ ಹಾಸ್ಟೆಲ್ ಬಳಿ ಅಡ್ಡಹಾಕಿ ಬೈಕ್ ಸವಾರರನ್ನು ಹಿಡಿದು ನಿಲ್ಲಿಸಿದ್ದಾರೆ. ಬೈಕ್ ಚಲಾಯಿಸುತ್ತಿದ್ದವರು ಓರ್ವ ಹಿರಿಯರಾಗಿದ್ದರು.
ಅವರನ್ನು ಪ್ರಶ್ನಿಸಿದಾಗ ತನ್ನ ಮಾಲಕ ಬೈಕ್ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಮಾಲಕರನ್ನು ಕೇಳಿದಾಗ ಬೈಕ್ ರೂಪಾ ಹೊಟೇಲ್ ಬಳಿಯ ಕಟ್ಟಡವೊಂದರ ಪಾರ್ಕಿಂಗ್ ಪ್ರದೇಶದಲ್ಲಿ ಕಳೆದ ಒಂದು ವರ್ಷದಿಂದ ನಿಲ್ಲಿಸಲಾಗಿತ್ತು. ಕೀ ಮತ್ತು ಹೆಲ್ಮೆಟ್ ಕೂಡ ಅದರಲ್ಲಿತ್ತು. ಹಾಗಾಗಿ ಅದನ್ನು ಸರಿಪಡಿಸಿ ಕೆಲಸದವರಿಗೆ ನೀಡಿದ್ದೆ ಎಂದು ತಿಳಿಸಿದ್ದಾರೆ. ಬಳಿಕ ಅವರೊಂದಿಗೆ ಬಂದರು ಠಾಣೆಗೆ ತೆರಳಿದ ನಾಗರಾಜ್ ಅವರು ನಡೆದಿರುವ ವಿಚಾರ ತಿಳಿಸಿ, ಬೈಕನ್ನು ಮತ್ತೆ ಪಡೆದುಕೊಂಡಿದ್ದಾರೆ.