ಸಂಪ್ಯ: ಆರ್ಯಾಪು ಗ್ರಾಮ ಪಂಚಾಯತ್ 2022-23ನೇ ಸಾಲಿನ ಜಮಾಬಂದಿ ಸಭೆ ಬುಧವಾರ ಗ್ರಾ.ಪಂ.ನ ನೇತಾಜಿ ಸುಭಾಸ್ ಚಂದ್ರ ಬೋಸ್ ಸಭಾಂಗಣದಲ್ಲಿ ನಡೆಯಿತು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ. ಅವರ ನೇತೃತ್ವದಲ್ಲಿ ಜಮಾಬಂದಿ ನಡೆಯಿತು.
ಈ ಸಂದರ್ಭ ಮಾತನಾಡಿದ ಅವರು, ಗ್ರಾಮ ಪಂಚಾಯತ್’ನ ಸ್ವಂತ ಆದಾಯದ ಮೂಲವಾದ ಆಸ್ತಿ ತೆರಿಗೆಗಳನ್ನು ಕಡ್ಡಾಯವಾಗಿ 2 ವರ್ಷಕ್ಕೊಮ್ಮೆ ಪರಿಷ್ಕರಣೆ ಮಾಡಬೇಕು. ಇದರಿಂದ ಸಂಪನ್ಮೂಲ ವೃದ್ಧಿಯಾಗುತ್ತದೆ ಎಂದು ಸಲಹೆ ನೀಡಿದರು.
ಇದಕ್ಕೆ ಪ್ರತಿಕ್ರಿಯೆಯಾಗಿ, ಪ್ರತಿ 2 ವರ್ಷಕ್ಕೊಮ್ಮೆ ಆಸ್ತಿ ತೆರಿಗೆಯನ್ನು ಹೆಚ್ಚಿಸುತ್ತಾ ಹೋದರೆ, ಗ್ರಾಮಸ್ಥರಿಗೆ ತೊಂದರೆ ಆಗಬಹುದೆಂಬ ಅಭಿಪ್ರಾಯ ವ್ಯಕ್ತವಾಯಿತು.
ಉತ್ತರಿಸಿದ ಜಿ.ಪಂ. ಸಿಇಓ, ಆಸ್ತಿ ತೆರಿಗೆ ಪರಿಷ್ಕರಣೆ ಮಾಡುವುದೆಂದರೆ ತೆರಿಗೆ ಏರಿಸುವುದೆಂದರ್ಥವಲ್ಲ. ಮಾರ್ಗಸೂಚಿ ದರದ ಪ್ರಕಾರ, ಆಸ್ತಿ ತೆರಿಗೆ ಪರಿಷ್ಕರಣೆ ಮಾಡಿದರೆ ಕೆಲವರಿಗೆ ತೆರಿಗೆ ಕಡಿಮೆ ಆಗುವ ಸಾಧ್ಯತೆಯೂ ಇರುತ್ತದೆ. ಇನ್ನು ಕೆಲವರಿಗೆ ಹೆಚ್ಚಾಗಬಹುದು. ಹಾಗಾಗಿ ಆಸ್ತಿ ತೆರಿಗೆ ಪರಿಷ್ಕರಣೆಗೆ ಮುಖ್ಯವಾಗಿ ಸದಸ್ಯರು ಸಹಕರಿಸಬೇಕು. ಗ್ರಾಮಸ್ಥರ ಸಹಕಾರವೂ ಅತೀ ಅಗತ್ಯ ಎಂದರು.
ಇದೇ ಸಂದರ್ಭ ಗ್ರಾಮಸ್ಥರು ಮಾತನಾಡಿ, ಜೆಜೆಎಂ ಯೋಜನೆಯ ಕಾಮಗಾರಿ ಕಳಪೆ ಆಗುತ್ತಿದೆ. ಟ್ಯಾಂಕ್ ಕ್ಯೂರಿಂಗ್ ಆಗುತ್ತಿಲ್ಲ. ಹೀಗಾದರೆ ಭವಿಷ್ಯದಲ್ಲಿ ಅಪಾಯ ಸಂಭವಿಸುವ ಸಾಧ್ಯತೆಯೂ ಇದೆ ಎಂದು ಗಮನ ಸೆಳೆದರು. ಪ್ರತಿಕ್ರಿಯಿಸಿದ ಡಾ. ಆನಂದ್ ಕೆ., ಇಂಜಿನಿಯರ್ ಪರಿಶೀಲಿಸಲು ಸೂಚಿಸಿದರು. ಲೋಪಗಳಿದ್ದರೆ ಕಾಮಗಾರಿ ಹಸ್ತಾಂತರ ಸಂದರ್ಭ ಗ್ರಾಮ ಪಂಚಾಯತ್ ಪರಿಶೀಲಿಸಿ ಕ್ರಮ ಕೈಗೊಳ್ಳಲು ಸೂಚಿಸಿದರು.
ಇದೇ ಸಂದರ್ಭ ಆರ್ಯಾಪು ಗ್ರಾಮ ಪಂಚಾಯತ್’ನ ಅಭಿವೃದ್ಧಿ ಕಾರ್ಯದ ಬಗ್ಗೆ ಮೆಚ್ಚುಗೆ ಸೂಚಿಸಿದ ಅವರು, ಗ್ರಂಥಾಲಯ ಹಾಗೂ ಉದ್ಯಾನವನಕ್ಕೆ ಭೇಟಿ ನೀಡಿ ಶ್ಲಾಘನೆ ವ್ಯಕ್ತಪಡಿಸಿದರು. ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಆರ್ಯಾಪು ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷ ಅಶೋಕ್ ನಾಯ್ಕ ಎನ್., ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗೇಶ್ ಎಂ., ಗ್ರೇಡ್ 1 ಕಾರ್ಯದರ್ಶಿ ಮೋನಪ್ಪ ಕೆ. ಉಪಸ್ಥಿತರಿದ್ದರು.