ಕಾರವಾರ: ಯುದ್ಧ ಪೀಡಿತ ಇಸ್ರೇಲ್‌ನ ವಿವಿಧ ನಗರಗಳಲ್ಲಿ 12,000ಕ್ಕೂ ಹೆಚ್ಚು ಕನ್ನಡಿಗರಿದ್ದು, ಎಲ್ಲರೂ ಸುರಕ್ಷಿತರಾಗಿದ್ದಾರೆಂದು ತಿಳಿದುಬಂದಿದೆ.
ಇಸ್ರೇಲ್’ನಲ್ಲಿ ಸಿಲುಕಿರುವ ಕನ್ನಡಿಗರಿಗೆ ಭಾರತ ಮತ್ತು ಇಸ್ರೇಲಿ ಸರ್ಕಾರಗಳು ಬೆಂಬಲ ನೀಡುತ್ತಿದ್ದು, ಭಾರತೀಯ ರಾಯಭಾರ ಕಚೇರಿ ಟೋಲ್-ಫ್ರೀ ಸಂಖ್ಯೆಯನ್ನೂ ನೀಡಿದೆ. ಯಾವುದೇ ತುರ್ತು ಸಂದರ್ಭದಲ್ಲಿ ಈ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
ಸುರಕ್ಷಿತ ಸ್ಥಳದಲ್ಲಿರುವ ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಕರೆ ಮಾಡಿ ತಾವು ಸುರಕ್ಷಿತರಾಗಿರುವ ಬಗ್ಗೆ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆಂದು ತಿಳಿದುಬಂದಿದೆ.
ಟೆಲ್ ಅವೀವ್’ನಲ್ಲಿರುವ ಕನ್ನಡಿಗ ದೀಪಕ್ ಪಿಂಟೋ ಅವರು ದೂರವಾಣಿ ಮೂಲಕ ಮಾಹಿತಿ ನೀಡಿದ್ದು, “ಉತ್ತರ ಕನ್ನಡದ 3,000ಕ್ಕೂ ಹೆಚ್ಚು ಜನರು ಇಲ್ಲಿ ವಾಸವಿದ್ದಾರೆ. ನಾವು ಕ್ಯಾಥೋಲಿಕ್ ಸಮಾಜ ಸೇರಿದಂತೆ ಹಲವಾರು ಸಂಸ್ಥೆಗಳನ್ನು ಹೊಂದಿದ್ದೇವೆ. ಪ್ರತಿಯೊಬ್ಬರೂ ಪರಸ್ಪರ ನಿರಂತರ ಸಂಪರ್ಕದಲ್ಲಿದ್ದೇವೆ. ನಮ್ಮಲ್ಲಿ ಕುಮಟಾ, ಕಾರವಾರ, ಹೊನ್ನಾವರ, ಸಿದ್ದಾಪುರ, ಶಿರಸಿ, ಯಲ್ಲಾಪುರದ ಜನ ಇದ್ದಾರೆ. ಚಿಂತೆ ಮಾಡುವ ಅಗತ್ಯವಿಲ್ಲ. ನಾವೆಲ್ಲರೂ ಸುರಕ್ಷಿತವಾಗಿದ್ದೇವೆ” ಎಂದು ಹೇಳಿದ್ದಾರೆ.
ನಮ್ಮಲ್ಲಿ ಹೆಚ್ಚಿನವರು ಹೊನ್ನಾವರದವರಿದ್ದಾರೆ. ಒಟ್ಟಾರೆ ಕನ್ನಡಿಗರನ್ನು ತೆಗೆದುಕೊಂಡರೆ 12,000 ಜನ ಇದ್ದೇವೆ. ಸಾಕಷ್ಟು ಮಂದಿ ಮನೆಗಳಲ್ಲಿ ಕೇರ್‌ಟೇಕರ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. “ನಮಗೆ ಉತ್ತಮ ವೇತನ ನೀಡಲಾಗುತ್ತಿದೆ. ವಸತಿ, ಆಹಾರ ಮತ್ತು ವೇತನವನ್ನು ನೀಡುತ್ತಿದ್ದಾರೆ, ಇದು ಭಾರತೀಯ ಕರೆನ್ಸಿಯಲ್ಲಿ 1.5 ಲಕ್ಷ ರೂ.ಗಿಂತ ಕಡಿಮೆಯಿಲ್ಲ ಎಂದು ತಿಳಿಸಿದ್ದಾರೆ.
ಟೆಲ್ ಅವೀವ್‌ನಿಂದ ಸುಮಾರು 100 ಕಿ.ಮೀ. ದೂರದಲ್ಲಿರುವ ಹಡೆರಾದಲ್ಲಿ ವಾಸವಿರುವ ಕನ್ನಡಿಗ ಗಾಡ್‌ಫ್ರೇ ಫೆರ್ನಾಂಡಿಸ್ ಅವರು ಮಾತನಾಡಿ, “ನಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಂದ ನಮಗೆ ಕರೆಗಳು ಬರುತ್ತಿವೆ. ಇಲ್ಲಿ ನಮ್ಮ ಜೀವಕ್ಕೆ ಯಾವುದೇ ಬೆದರಿಕೆ ಇಲ್ಲ. ಇಸ್ರೇಲ್ ಮತ್ತು ಭಾರತ ಎರಡೂ ಸರ್ಕಾರಗಳು ನಮ್ಮನ್ನು ನೋಡಿಕೊಳ್ಳುತ್ತಿವೆ. ಯಾವುದೇ ಕನ್ನಡಿಗರಿಗೆ ಯಾವುದೇ ಸಾವು-ನೋವು ಸಂಭವಿಸಿಲ್ಲ. ಇಸ್ರೇಲಿಗಳು ನಮಗೆ ಮನೆಯೊಳಗೆ ಇರಲು ಹೇಳಿದ್ದಾರೆ, ”ಎಂದು ಹೇಳಿದ್ದಾರೆ.
ಫರ್ನಾಂಡಿಸ್ ಹೊನ್ನಾವರದ ಕಾಸರಗೋಡಿನವರಾಗಿದ್ದು, ಕಳೆದ ಎರಡು ವರ್ಷಗಳಿಂದ ಇಸ್ರೇಲ್‌ನಲ್ಲಿ ಕೇರ್‌ಟೇಕರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇಷ್ಟು ದಿನ ಟೆಲ್ ಅವೀವ್‌ನಲ್ಲಿ ಯಾವುದೇ ಶೆಲ್ ದಾಳಿ ನಡೆಯದಿದ್ದರೂ, ಸೋಮವಾರ ಕೆಲವು ಕ್ಷಿಪಣಿಗಳು ಇಸ್ರೇಲ್ ರಾಜಧಾನಿಯನ್ನು ಅಪ್ಪಳಿಸಿವೆ. ಆದರೆ ಇದರಿಂದ ಹೆಚ್ಚಿನ ಹಾನಿಯಾಗಿಲ್ಲ ಎಂದು ತಿಳಿಸಿದ್ದಾರೆ.
ಕೆಲವು ರಾಕೆಟ್‌ಗಳನ್ನು ಇಸ್ರೇಲ್‌ನ ಕ್ಷಿಪಣಿ ವಿರೋಧಿ ರಕ್ಷಣಾ ವ್ಯವಸ್ಥೆ, ಐರನ್ ಡೋಮ್ ತಡೆಹಿಡಿಯಲಾಯಿತು. ಕೆಲವು ನೇಪಾಳಿಗಳು, ಥೈಲ್ಯಾಂಡ್‌ನ ಏಳು ಮಂದಿ ಮತ್ತು ಫಿಲಿಪೈನ್ಸ್‌ನ ಕೆಲವರನ್ನು ಹತ್ಯೆ ಮಾಡಲಾಗಿದೆ. ಇದಾದ ಬಳಿಕ ಭಾರತದಲ್ಲಿಯೂ ಭೀತಿ ಶುರುವಾಗಿದೆ. ಆದರೆ, ಚಿಂತೆ ಮಾಡಲು ಅಗತ್ಯವಿಲ್ಲ. ಕೋಲ್ಕತ್ತಾದ ಮಹಿಳೆಯೊಬ್ಬರು ನಾಪತ್ತೆಯಾಗಿರುವುದನ್ನು ಹೊರತುಪಡಿಸಿದರೆ, ಭಾರತೀಯರಿಗೆ ಯಾವುದೇ ಹಾನಿಗಳಾಗಿಲ್ಲ. ವೈಮಾನಿಕ ದಾಳಿ ಅಥವಾ ಕ್ಷಿಪಣಿ ಸಮೀಪಿಸಿದಾಗಲೆಲ್ಲಾ ಸೈರನ್‌ಗಳು ಮೊಳಗುತ್ತವೆ ಮತ್ತು ಜನರನ್ನು ಬಂಕರ್‌ಗಳಲ್ಲಿ ಇರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಜಗೋಳಿ ಮೂಲದ ದೇವದಾಸ್ ಶೆಟ್ಟಿ ಕಳೆದ 15 ವರ್ಷಗಳ ಹಿಂದೆ ಇಸ್ರೇಲ್’ಗೆ ತೆರಳಿದ್ದರು. ಇದೀಗ ವಿಡಿಯೋ ಸಂದೇಶವೊಂದನ್ನು ರವಾನಿಸಿರುವ ಅವರು, ಇಸ್ರೇಲ್‌ನಲ್ಲಿ ಕೆಲಸ ಮಾಡುವವರು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಸರ್ಕಾರ ತನ್ನ ನಾಗರಿಕರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದೆ. ಇಸ್ರೇಲ್‌ನಲ್ಲಿ ಉಡುಪಿ ಜಿಲ್ಲೆಯ ಸುಮಾರು 200 ಜನರಿದ್ದಾರೆ. ಅವರ ಕುಟುಂಬಸ್ಥರು ಆತಂಕಪಡುವ ಅಗತ್ಯವಿಲ್ಲ. ಜನರು ಸುರಕ್ಷಿತವಾಗಿರಲು ಎಲ್ಲೆಂದರಲ್ಲಿ ಬಂಕರ್‌ಗಳಿವೆ ಎಂದು ಮಾಹಿತಿ ನೀಡಿದ್ದಾರೆ.