ಸುಬ್ರಹ್ಮಣ್ಯ : ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಹೆಚ್.ಡಿ. ದೇವೇಗೌಡ ಹಾಗೂ ಚೆನ್ನಮ್ಮ ದಂಪತಿ ಅ. 9ರಂದು ಬೆಳಿಗ್ಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದರ್ಶನ ಪಡೆದು, ವಿಶೇಷ ಸೇವೆ ಸಲ್ಲಿಸಿದರು.
ಹೆಚ್.ಡಿ.ದೇವೇಗೌಡ ದಂಪತಿ ಅ. 8ರಂದು ರಾತ್ರಿ ಬೆಂಗಳೂರಿನಿಂದ ಮಂಗಳೂರಿಗೆ ವಿಮಾನ ಮೂಲಕ ಬಂದು ಅಲ್ಲಿಂದ ರಸ್ತೆ ಮೂಲಕ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದರು. ರಾತ್ರಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾಸ್ತವ್ಯ ಮಾಡಿ ಅ. 9ರಂದು ಪ್ರಾತಃ ಕಾಲ ವಿಶೇಷ ಸೇವೆ ನೆರವೇರಿಸಿದರು.
ಹೆಚ್.ಡಿ. ದೇವೇಗೌಡ ದಂಪತಿ ನಿನ್ನೆ ಮಧ್ಯಾಹ್ನ ಬೆಂಗಳೂರಿನ ಹೆಚ್ ಎ ಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸುವ ನಿರೀಕ್ಷೆ ಇತ್ತು. ಆದರೆ, ಸಕಲೇಶಪುರ ಮತ್ತು ಕುಕ್ಕೆ ಸುಬ್ರಹ್ಮಣ್ಯ ಕಡೆಗಳಲ್ಲಿ ದಟ್ಟವಾದ ಮೋಡ ಕವಿದ ವಾತಾವರಣವಿದ್ದ ಹಿನ್ನೆಲೆಯಲ್ಲಿ ಮಂಗಳೂರು ವಿಮಾಣ ನಿಲ್ದಾಣಕ್ಕೆ ಬಂದು ಬಳಿಕ ರಸ್ತೆ ಮಾರ್ಗವಾಗಿ ರಾತ್ರಿಯೇ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ಇಲ್ಲಿ ವಾಸ್ತವ್ಯ ಹೂಡಿದರು.
ಸೋಮವಾರ ಮುಂಜಾನೆ ದೇಗುಲಕ್ಕೆ ಆಗಮಿಸಿ, ಮಹಾಪೂಜೆ ಹಾಗೂ ಇನ್ನಿತರ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ತುಲಾಭಾರ ಸೇವೆ, ಆಶ್ಲೇಷ ಬಲಿ, ನಾಗ ಪ್ರತಿಷ್ಟೆ ಸೇರಿದಂತೆ ವಿಶೇಷ ಪೂಜೆಗಳಲ್ಲಿ ಭಾಗವಹಿಸಿದ್ದು, ಮಧ್ಯಾಹ್ನದ ವೇಳೆಗೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ ಎಂದು ತಿಳಿದುಬಂದಿದೆ. ದೇವೇ ಗೌಡ ದಂಪತಿಗೆ ದೇವಳದ ಆನೆ ಯಶಸ್ವಿ ಆಶೀರ್ವದಿಸಿತು. ದೇವಸ್ಥಾನದ ಶಿಷ್ಟಾಚಾರ ವಿಭಾಗದಿಂದ ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ. ಸದಾಶಿವ ಉಪಸ್ಥಿತರಿದ್ದರು.