ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ಇಸ್ರೋ ʻವಿಶ್ವ ಅಂತರಿಕ್ಷ ಸಪ್ತಾಹʼ

ಪುತ್ತೂರು: ಚಂದ್ರಯಾನ -3 ಮತ್ತು ಆದಿತ್ಯ ಎಲ್‌1ʼ ಬಾಹ್ಯಾಕಾಶ ಯೋಜನೆ ಮೂಲಕ ದೇಶದ ಮನೆಮಾತಾಗಿರುವ ಇಸ್ರೋ ವಿಜ್ಞಾನಿಗಳ ತಂಡ ಪುತ್ತೂರಿನಲ್ಲಿ ʻವಿಶ್ವ ಅಂತರಿಕ್ಷ ಸಪ್ತಾಹ -23ʼ ಕಾರ್ಯಕ್ರಮವನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಯಾದವಶ್ರೀ ಅಡಿಟೋರಿಯಂನಲ್ಲಿ ಆಯೋಜಿಸಿತ್ತು.

ಇಸ್ರೋ ಯು.ಆರ್. ರಾವ್ ಸ್ಯಾಟಲೈಟ್ ಸೆಂಟರ್ ವತಿಯಿಂದ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಹಯೋಗದೊಂದಿಗೆ ದಿನವಿಡೀ ಸ್ಪರ್ಧೆ, ಇಸ್ರೋ ಮಾದರಿಗಳ ಪ್ರದರ್ಶನ, ರಸಪ್ರಶ್ನೆ, ವಿಚಾರ ಸಂಕಿರಣಗಳ ಮೂಲಕ ಶಾಲೆಯಲ್ಲಿ ಬಾಹ್ಯಾಕಾಶ ವಿಜ್ಞಾನದ ವಾತಾವರಣ ಸೃಷ್ಟಿಸಿತು.

ಬೆಳಿಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕ್ ಸು. ರಾಮಣ್ಣ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿ ಮಾತನಾಡಿ, ಪ್ರಯತ್ನವೇ ಪರಮೇಶ್ವರʼ ಎಂಬ ನಮ್ಮ ಮಣ್ಣಿನ ಮೂಲ ನಂಬಿಕೆಯಿಂದ ಎಲ್ಲಾ ಕಾರ್ಯಗಳು ಸಾಧಿಸಲ್ಪಡುತ್ತದೆ. ದೇಶದ ಪರಮ ವೈಭವವನ್ನು ಎತ್ತರಕ್ಕೇರಿಸುವಲ್ಲಿಯೂ ಇಸ್ರೋ ವಿಜ್ಞಾನಿಗಳೂ ಇದೇ ಪ್ರಯತ್ನ ಮತ್ತು ನಂಬಿಕೆಯಲ್ಲಿ ಸಾಧನೆ ಮಾಡಿತೋರಿಸಿದರು. ಧನಾರ್ಜನೆಯ ಮಾರ್ಗದ ಬದಲು ಜ್ಞಾನಾರ್ಜನೆಯ ಮಾರ್ಗದಲ್ಲಿ ಮುಂದುವರಿದು ಸಾಧನೆ ಮಾಡಿ ಸಂತೋಷ ಪಡೆಯುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾರ್ಯತತ್ಪರರಾಗಬೇಕುʼ ಎಂದರು.































 
 

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ʻಮೆಕಾಲೆ ಶಿಕ್ಷಣ ಕ್ರಮದಿಂದಾಗಿ ಈ ದೇಶದ ನಿಜವಾದ ಪರಂಪರೆ, ಶ್ರೇಷ್ಠತೆ, ವೈಭವಗಳು ಇಲ್ಲಿಯ ಜನರಿಗೆ ತಿಳಿಯಲೇ ಇಲ್ಲ. ಇತ್ತೀಚೆಗಿನ ವರ್ಷಗಳಲ್ಲಿ ಇಡೀ ದೇಶದಲ್ಲಿ ಪರಿವರ್ತನೆ ತೋರುತ್ತಿದೆ. ನಮ್ಮ ದೇಶ ಏನು ಎಂಬುದು ಜಗತ್ತಿಗೆ ತಿಳಿಸುವಷ್ಟರಮಟ್ಟಿನಲ್ಲಿ ಬೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ಭಾರತ ಸರ್ವಶ್ರೇಷ್ಠವಾಗಲಿದೆ ಎಂಬುದು ಇಸ್ರೋ ಚಂದ್ರಯಾನ ಯಶಸ್ವಿಯಾಗುವುದರ ಮೂಲಕ ಜಗತ್ತಿಗೆ ತಿಳಿದಿದೆ ಎಂದರು.

ಮುಖ್ಯ ಅತಿಥಿ ಇಸ್ರೋ ಯು.ಆರ್. ಸ್ಯಾಟಲೈಟ್ ಸೆಂಟರ್‌ನ ಗ್ರೂಪ್ ಡೈರೆಕ್ಟರ್ ಎ. ರಾಜೇಂದ್ರ ಮಾತನಾಡಿ, ಇಸ್ರೋದ ಪರಿಕಲ್ಪನೆಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ʻಅಂತರಿಕ್ಷ ಸಪ್ತಾಹʼ ಮಾಡಲಾಗುತ್ತಿದೆ. ಈ ಬಾರಿ ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಈ ಕಾರ್ಯಕ್ರಮ ಆಯೋಜಿಸಲು ಸಹಯೋಗ ನೀಡಿರುವುದಕ್ಕೆ ಸಂತೋಷವಾಗಿದೆ. ಇಸ್ರೋದಲ್ಲಿ ಪುತ್ತೂರಿನ ಮುತ್ತುಗಳು ಇನ್ನಷ್ಟು ಮೂಡಿಬರಲಿʼ ಎಂದರು.

ಇನ್ನೋರ್ವ ಮುಖ್ಯ ಅತಿಥಿ ಭಾರತ ರಕ್ಷಣಾ ಸಚಿವಾಲಯದ ಎಡಿಎ ಮತ್ತು ಡಿಆರ್‌ಡಿಒ ದ ನಿವೃತ್ತ ಸಾರ್ವಜನಿಕ ಸಂಪರ್ಕ ಅಧಿಕಾರಿ ಜಯಪ್ರಕಾಶ್ ರಾವ್ ಮಾತನಾಡಿ, ಭಾರತ ಕಟ್ಟುವ ಜನರನ್ನು ಸಮಾಜಕ್ಕೆ ಕೊಡುವ ಸ್ವಾಮಿ ವಿವೇಕಾನಂದರ ಆಶಯ ವಿವೇಕಾನಂದ ವಿದ್ಯಾಸಂಸ್ಥೆಗಳಲ್ಲಿ ಈಡೇರುತ್ತಿದೆ. ಭಾರತದ ವಿಜ್ಞಾನ ಮತ್ತು ತಾಂತ್ರಿಕ ಚಳುವಳಿಗೆ ಇಸ್ರೋ ಮತ್ತು ಡಿಆರ್‌ಡಿಒ ಶ್ರಮಿಸುತ್ತಿದೆ. ವೈಜ್ಞಾನಿಕ ಮತ್ತು ತಾಂತ್ರಿಕವಾಗಿ ಭಾರತ ಇನ್ನಷ್ಟು ಸ್ವಾತಂತ್ರ್ಯ ಹೊಂದಬೇಕಾಗಿದೆ ಎಂದರು.
ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿಯ ಇಸಿಒ ಅಮೃತಕಲಾ ಉಪಸ್ಥಿತರಿದ್ದರು. ಶಾಲಾ ಸಂಚಾಲಕ ರವಿನಾರಾಯಣ ಎಂ., ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಮುರಳೀಧರ ಕೆ., ವಿವೇಕಾನಂದ ಪಿಯು ಕಾಲೇಜಿನ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಹರೀಶ್ ಶಾಸ್ತ್ರಿ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಹರಿಣಾಕ್ಷಿ ಜೆ. ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

15 ಮಂದಿ ಇಸ್ರೋ ವಿಜ್ಞಾನಿಗಳಿಗೆ ವೇದಿಕೆಯಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶಿವಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸಹಶಿಕ್ಷಕಿ ದೀಪ್ತಿ ಆರ್. ಭಟ್ ವಂದಿಸಿದರು. ಶಿಕ್ಷಕಿಯರಾದ ರೇಖಾ ಆರ್., ಅಶ್ವಿನಿ ಎಸ್. ಮತ್ತು ನವಿತಾ ಪಿ.ಕೆ. ನಿರೂಪಿಸಿದರು.
ಶಾಲಾ ಮುಖ್ಯಶಿಕ್ಷಕ ಸತೀಶ್ ಕುಮಾರ್ ರೈ ಮತ್ತು ಶಿಕ್ಷಕ -ಶಿಕ್ಷಕೇತರ ವೃಂದ ಸಹಕರಿಸಿದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಇಸ್ರೋದ ವಿಜ್ಞಾನಿಗಳಾದ ಡಾ. ರಾಧಾಕೃಷ್ಣ ವಾಟೆಡ್ಕ ರವರು ‘ಚಂದ್ರಯಾನ ಮತ್ತು ಆದಿತ್ಯ ಎಲ್ 1’ ಯೋಜನೆ, ವಿಜ್ಞಾನಿ ಶ್ರೀಧರ್ ರವರು ‘ಉಪಗ್ರಹ ಮತ್ತು ರಾಕೆಟ್’ ವಿಷಯದಲ್ಲಿ ಹಾಗೂ ಡಾ. ಅರವಿಂದ ಕುಮಾರ್ ಎಂ. ರವರು ‘ಬಾಹ್ಯಾಕಾಶದಲ್ಲಿ ಮಾನವನ ಆರೋಗ್ಯದ ಮೇಲೆ ಪರಿಣಾಮ’ ವಿಷಯದಲ್ಲಿ ವಿಚಾರ ಸಂಕಿರಣ ನಡೆಸಿಕೊಟ್ಟರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top