ಪುತ್ತೂರು: ಅಂತಾರಾಜ್ಯ ದರೋಡೆ ಪ್ರಕರಣದಿಂದ ಸುದ್ದಿಯಾಗಿದ್ದ ಬಡಗನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮತ್ತೆ ಕಳ್ಳತನ ಪ್ರಕರಣ ನಡೆದಿದೆ.
ಬಡಗನ್ನೂರು ಗ್ರಾ. ಪಂ. ವ್ಯಾಪ್ತಿಯ ಪಟ್ಟೆ ಶಾಲೆಯ ಬಳಿಯ ದಿನಸಿ ಅಂಗಡಿಗೆ ಶನಿವಾರ ರಾತ್ರಿ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಅಂಗಡಿ ತುಂಬಾ ಜಾಲಾಡಿದ್ದಾರೆ. ಅಂಗಡಿ ಮಾಲಕ ಶೇಖರ್ ನಾಯಕ್ ಯಾವುದೇ ನಗದು ಅಂಗಡಿಯಲ್ಲಿ ಇರಿಸದ ಕಾರಣ ಬಚಾವಾಗಿದ್ದಾರೆ. ಅಂಗಡಿಯ ಡ್ರಾಯರ್ ನಿಂದ ಚಿಲ್ಲರೆ ಹಣ ಕಳವಾಗಿದೆ. ಬೆಳಿಗ್ಗೆ ಅಂಗಡಿ ಮಾಲಕರು ಬಂದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ದೂರು ನೀಡಿದ್ದು, ಹೊಯ್ಸಳ ಪೊಲೀಸರು ಹಾಗೂ ಈಶ್ವರ ಮಂಗಲ ಹೊರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಡಗನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡುವನ್ನೂರು ಗ್ರಾಮದಲ್ಲಿ ಪಂಚಾಯಿತಿ ಮಾಜಿ ಸದಸ್ಯನ ಮನೆಯಲ್ಲಿ ದರೋಡೆ ನಡೆದು ವಾರದ ಹಿಂದೆ ಆರೋಪಿಗಳ ಬಂಧನವಾಗಿತ್ತು. ದರೋಡೆ ಪ್ರಕರಣ ಮಾಸುವ ಮುನ್ನವೇ ಮತ್ತೆ ಕಳ್ಳತನ ಪ್ರಕರಣಗಳು ನಡೆಯುತ್ತಿರುವುದು ಸ್ಥಳೀಯ ಜನರ ಆತಂಕಕ್ಕೆ ಕಾರಣವಾಗಿದೆ.