ಪುತ್ತೂರು : ಗೇರು ಹಾಗೂ ಡ್ರೈಫ್ರೂಟ್ಸ್ ಉದ್ಯಮದಲ್ಲಿ ಪ್ರಸಿದ್ಧಿ ಪಡೆದಿರುವ ಬೋಳಾಸ್ ಸಂಸ್ಥೆಯು ಕುದ್ಮಾರು ಹಿರಿಯ ಪ್ರಾಥಮಿಕ ಶಾಲೆಗೆ ಬೋರ್‌ವೆಲ್ ಹಾಗೂ ನೀರಿನ ಟ್ಯಾಂಕ್ ಅನ್ನು ಕೊಡುಗೆಯಾಗಿ ನೀಡಿದೆ.
ಪತ್ರಕರ್ತ, ಕುದ್ಮಾರು ಶಾಲಾ ಹಿರಿಯ ವಿದ್ಯಾರ್ಥಿ ರಾಮಚಂದ್ರ ಬರೆಪ್ಪಾಡಿ ಅವರ ಮನವಿ ಮೇರೆಗೆ ಬೋಳಾಸ್ ಆಗ್ರೋ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕ ದಾಮೋದರ್ ಕಾಮತ್ ಅವರು ಬೋರ್‌ವೆಲ್ ಹಾಗೂ ನೀರಿನ ಟ್ಯಾಂಕ್ ನಿರ್ಮಾಣಕ್ಕಾಗಿ ಒಟ್ಟು 4 ಲಕ್ಷ ರೂ. ಅನುದಾನ ಒದಗಿಸಿರುತ್ತಾರೆ.
ಬೋಳಾಸ್ ಬಗ್ಗೆ 1958ರಲ್ಲಿ ಕಾರ್ಕಳದಲ್ಲಿ ಸ್ಥಾಪನೆಯಾಗಿರುವ ಬೋಳಾಸ್ ಇಂದು ಕರಾವಳಿ ಭಾಗದ ಪ್ರಖ್ಯಾತ ಸಂಸ್ಥೆಯಾಗಿದೆ. ಉತೃಷ್ಟ ಗುಣಮಟ್ಟ, ಸ್ವಾದಿಷ್ಟಕರ ಡ್ರೈ ಫ್ರುಟ್ಸ್ ಮತ್ತು ನಟ್ಸ್ ಪೂರೈಸುವ ಬೋಳಾಸ್ ಸಂಸ್ಕರಿಸಿದ ಉತ್ಪನ್ನವನ್ನು ಗ್ರಾಹಕರಿಗೆ ನೇರವಾಗಿ ಒದಗಿಸುವ ನಿಟ್ಟಿನಲ್ಲಿ ಪ್ರಮುಖ ನಗರಗಳಲ್ಲಿ ರಿಟೈಲ್ ಮಳಿಗೆಗಳನ್ನು ತೆರೆದಿದೆ. 30ಕ್ಕೂ ಅಧಿಕ ದೇಶಗಳಿಗೆ ಗೋಡಂಬಿ ಮತ್ತು ಇತರ ಡ್ರೈಫ್ರುಟ್ಸ್ ಉತ್ಪನ್ನ ಪೂರೈಸುವ ಬೋಳಾಸ್ ಇದೀಗ ಕರ್ನಾಟಕ, ಗೋವಾ, ಮುಂಬಯಿ ಸೇರಿದಂತೆ ವಿವಿಧೆಡೆ 90ಕ್ಕೂ ಅಧಿಕ ಔಟ್‌ಲೆಟ್ ತೆರೆದಿದೆ.