ಸ್ಟಾಕ್ ಹೋಮ್: ಇರಾನ್‌ನಲ್ಲಿ ಮಹಿಳೆಯರ ಮೇಲಿನ ದಬ್ಬಾಳಿಕೆ, ಮಾನವ ಹಕ್ಕುಗಳು ಮತ್ತು ಎಲ್ಲರ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ನರ್ಗೆಸ್ ಮೊಹಮ್ಮದಿ ಅವರಿಗೆ 2023ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿದೆ. ನರ್ಗೆಸ್ ಮೊಹಮ್ಮದಿ ಮಹಿಳಾ ಮತ್ತು ಮಾನವ ಹಕ್ಕುಗಳ ಪರ ವಕೀಲೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದಾರೆ.
ಈ ವರ್ಷದ ಶಾಂತಿ ಪ್ರಶಸ್ತಿಯು ಮಹಿಳೆಯರನ್ನು ಗುರಿಯಾಗಿಸುವ ತಾರತಮ್ಯ ಮತ್ತು ದಬ್ಬಾಳಿಕೆಯ ಪ್ರಭುತ್ವದ ಆಡಳಿತದ ನೀತಿಗಳ ವಿರುದ್ಧ ಪ್ರದರ್ಶಿಸಿದ ಲಕ್ಷಾಂತರ ಜನರನ್ನು ಗುರುತಿಸುತ್ತದೆ ಎಂದು ನೊಬೆಲ್ ಸಮಿತಿಯು ಹೇಳಿದೆ.
ಅಪಾರವಾದ ವೈಯಕ್ತಿಕ ನಷ್ಟದೊಂದಿಗೆ ಮೊಹಮ್ಮದಿ ಹೋರಾಟ ಮಾಡಿಕೊಂಡು ಬಂದಿದ್ದು, ಇರಾನ್ ಆಡಳಿತ 13 ಬಾರಿ ಅವರನ್ನು ಬಂಧಿಸಿದೆ. ಐದು ಬಾರಿ ಅಪರಾಧಿ ಎಂದು ತೀರ್ಪು ನೀಡಿದೆ. ಅಲ್ಲದೇ, ಆಕೆಗೆ ಒಟ್ಟು 31 ವರ್ಷಗಳ ಜೈಲು ಶಿಕ್ಷೆ ಮತ್ತು 154 ಛಡಿ ಏಟಿನ ಶಿಕ್ಷೆ ವಿಧಿಸಿದೆ. ಮೊಹಮ್ಮದಿ ಇನ್ನೂ ಕೂಡ ಜೈಲಿನಲ್ಲಿದ್ದಾರೆ.