ಪುತ್ತೂರು: ಮೂಡಬಿದ್ರೆ ಆಳ್ವಾಸ್‍ನಲ್ಲಿ ಶುಕ್ರವಾರ ನಡೆದ ಉದ್ಯೋಗ ಮೇಳಕ್ಕೆ ಪುತ್ತೂರಿನಿಂದ ಸುಮಾರು 350 ಮಂದಿ ಉದ್ಯೋಗಾಕಾಂಕ್ಷಿಗಳು ತೆರಳಿದ್ದಾರೆ.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದ ಪುತ್ತೂರು ರೈ ಎಸ್ಟೇಟ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ಮೂಲಕ ಪುತ್ತೂರಿನ ಜನತೆಗೆ ಉದ್ಯೋಗ ಮೇಳಕ್ಕೆ ತೆರಳಲು ವಾಹನದ ವ್ಯವಸ್ಥೆ ಮಾಡಲಾಗಿತ್ತು.
ಪುತ್ತೂರು ಶಾಸಕರ ಟ್ರಸ್ಟ್ ಮೂಲಕ ನಿರಂತರ ಉದ್ಯೋಗ ತರಬೇತಿ ಆಯೋಜನೆ; ಸುದೇಶ್ ಶೆಟ್ಟಿ
ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಶಾಂತಿನಗರ ಮಾತನಾಡಿ, ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಮೂಲಕ ಆಳ್ವಾಸ್ ನಲ್ಲಿ ನಡೆದ ಪ್ರಗತಿ ಉದ್ಯೋಗ ಮೇಳಕ್ಕೆ 350 ಮಂದಿ ತೆರಳಿದ್ದಾರೆ. ಆಳ್ವಾಸ್‌ಗೆ ತೆರಳುವ ಮಂದಿಗೆ ಬಸ್‌ನ ವ್ಯವಸ್ಥೆ ಹಾಗೂ ಇತರೆ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಈ ಹಿಂದೆ ಟ್ರಸ್ಟ್ ಮೂಲಕ ಕೆಎಸ್‌ಆರ್‌ಟಿಸಿ ಬಸ್ ಚಾಲನಾ ತರಬೇತಿಯನ್ನು ನಡೆಸಿಕೊಡುವ ಮೂಲಕ ಸುಮಾರು 80 ಮಂದಿಗೆ ಬಸ್ ಚಾಲಕ ಹುದ್ದೆಯನ್ನು ಮಾಡಿಕೊಡಲಾಗಿತ್ತು. ಮುಂದಿನ ದಿನಗಳಲ್ಲಿ ಪುತ್ತೂರಿನಲ್ಲಿ ಟ್ರಸ್ಟ್ ಮೂಲಕ ಮೆಸ್ಕಾಂನಲ್ಲಿ ವಿದ್ಯುತ್ ಕಂಬ ಹತ್ತುವ ತರಬೇತಿ ಹಾಗೂ ಪೊಲೀಸ್ ತರಬೇತಿಯನ್ನು ಆಯೋಜಿಸಲಾಗುವುದು. ಪುತ್ತೂರು ಭಾಗದ ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಉದ್ಯೋಗವನ್ನು ಕಲ್ಪಿಸುವ ನಿಟ್ಟಿನಲ್ಲಿ ಟ್ರಸ್ಟ್‌ನ ಮೂಲಕ ನಿರಂತರ ಪ್ರಯತ್ನ ಮುಂದುವರೆಯಲಿದೆ. ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಸೂಕ್ತ ಜೀವನ ಭದ್ರತೆಯ ಅಗತ್ಯವಿದ್ದು ಇದನ್ನು ಪೂರೈಸಲು ಟ್ರಸ್ಟ್ ನಿರಂತರವಾಗಿ ಕೆಲಸ ಮಾಡಲಿದೆ ಎಂದು ಹೇಳಿದರು.
ಟ್ರಸ್ಟ್‌ನ ಟ್ರಸ್ಟಿ, ಉದ್ಯೋಗ ಮೇಳದ ಆಯೋಜಕ ನಿಹಾಲ್ ಶೆಟ್ಟಿ ಮಾತನಾಡಿ, ವಿವಿಧ ಕಂಪೆನಿಗಳಲ್ಲಿ ಉದ್ಯೋಗಕ್ಕಾಗಿ ಸಂದರ್ಶನಕ್ಕೆ ತೆರಳುವ ಆಕಾಂಕ್ಷಿಗಳು ಯಾವ ರೀತಿ ಸಂದರ್ಶನವನ್ನು ಎದುರಿಸಬೇಕು ಎಂಬುದರ ಬಗ್ಗೆ ವಿವರಿಸಿದರು. ಉದ್ಯೋಗ ಯಾವುದೇ ಕಂಪೆನಿಯಲ್ಲಿ ದೊರೆತರೂ ನಾವು ಅಲ್ಲಿ ಕೆಲಸ ಮಾಡುವ ಆಸಕ್ತಿಯನ್ನು ಹೊಂದಿರಬೇಕು. ಉದ್ಯೋಗದಿಂದ ಯಾರೂ ವಂಚತರಾಗಬಾರದು. ವಿದ್ಯಾವಂತ ನಿರುದ್ಯೋಗಿಗಳು ಸದಾ ಉದ್ಯೋಗ ಹುಡುಕುವಲ್ಲಿ ಮುತುವರ್ಜಿ ವಹಿಸಿದ್ದಲ್ಲಿ ಮುಂದೆ ಜೀವನದಲ್ಲಿ ಯಸಶ್ಸು ಕಾಣಲು ಸಾಧ್ಯ ಎಂದು ಹೇಳಿದರು. ಶಾಸಕರ ಕಚೇರಿ ಸಿಬ್ಬಂದಿಗಳಾದ ಪ್ರದೀಪ್, ಜುನೈದ್ ಬಡಗನ್ನೂರು, ಯೋಗೀಶ್ ಸಾಮಾನಿ, ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ, ರಿತೇಶ್ ಶೆಟ್ಟಿ ಮಂಗಳೂರು, ನಗರಸಭಾ ಸದಸ್ಯ ರಿಯಾಝ್ ಪರ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು.