ಮಂಗಳೂರು: ಶುಕ್ರವಾರಕ್ಕಾಗಿ ಓದುಗರ ದೊಡ್ಡ ಗುಂಪೇ ಕಾದು ಕುಳಿತುಕೊಳ್ಳುತ್ತಿದ್ದರು. ಕಾರಣ, ಮಂಗಳ ಕುಟುಂಬ ವಾರಪತ್ರಿಕೆ ಪ್ರಕಟವಾಗುತ್ತಿದ್ದ ದಿನವದು.
ಆದರೆ ಇನ್ನು ಅಂತಹ ಕಾತರತೆ ಇರದು. 40 ವರ್ಷಗಳ ಪತ್ರಿಕಾ ಯಾನಕ್ಕೆ ಮಂಗಳ ವಾರಪತ್ರಿಕೆ ಮಂಗಳ ಹಾಡಿದೆ. ಓದುಗರು ನಿರಾಸೆಯ ನಿಟ್ಟುಸಿರನ್ನಷ್ಟೇ ಹೊರಹಾಕುವಂತಾಗಿದೆ.
ಈ ವಾರ ಮಂಗಳ ವಾರಪತ್ರಿಕೆಯ ಕೊನೆಯ ಸಂಚಿಕೆ ಮುದ್ರಣಗೊಂಡಿದೆ. ಈ ಬಗ್ಗೆ ಸಂಪಾದಕರು ಪ್ರಕಟಣೆಯನ್ನು ನೀಡಿದ್ದಾರೆ.
ಕನ್ನಡ ಪತ್ರಿಕಾರಂಗದಲ್ಲಿ ತನ್ನ ಛಾಯೆಯನ್ನು ಮೂಡಿಸಿದ್ದ ಮಂಗಳ, ಓದುಗ ವಲಯದಲ್ಲಿ ವಿಶೇಷ ಸ್ಥಾನಮಾನ ಪಡೆದುಕೊಂಡಿತ್ತು. ಬಾಲಮಂಗಳ, ಚಿತ್ರಕತೆಯಿಂದ ಸಣ್ಣ ಮಕ್ಕಳ ಓದು ಆರಂಭವಾಗುತ್ತಿದ್ದರೆ, ದೊಡ್ಡವರ ಓದು ಮಂಗಳದಿಂದ ಆರಂಭವಾಗುತ್ತಿತ್ತು. ಹಾಗಾಗಿ ಕನ್ನಡ ಸಾರಸ್ವತ ಲೋಕಕ್ಕೆ ಮಂಗಳ ವಾರಪತ್ರಿಕೆಯ ಕೊಡುಗೆ ಅನನ್ಯ.
ಮಂಗಳ ವಾರಪತ್ರಿಕೆಯ ಮುದ್ರಣ ಸ್ಥಗಿತಕ್ಕೆ ಆರ್ಥೀಕ ಸಂಕಷ್ಟದ ಕಾರಣವನ್ನು ನೀಡಲಾಗಿದೆ. ಕೊರೋನಾದ ಬಳಿಕ ಮೂರು ವರ್ಷಗಳ ಕಾಲ ಮಂಗಳವನ್ನು ಮುನ್ನಡೆಸಿಕೊಂಡು ಬರಲಾಗಿದೆ. ಆದರೆ ಆರ್ಥಿಕ ತುರ್ತನ್ನು ಎದುರಿಸಲಾಗದೇ, ಅನಿವಾರ್ಯವಾಗಿ ಪತ್ರಿಕೆ ಮುದ್ರಣ ಸ್ಥಗಿತಗೊಳಿಸಿದೆ ಎಂದು ಹೇಳಲಾಗಿದೆ.