ಮುಂಬೈ: ಆರ್.ಬಿ.ಐ.ನ ಹಣಕಾಸು ನೀತಿ ಸಮಿತಿಯೂ ಸತತ ನಾಲ್ಕನೇ ತಿಂಗಳಿನಲ್ಲಿಯೂ ಶೇ. 6.5ರ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶುಕ್ರವಾರ ತಿಳಿಸಿದೆ.
ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದರಿಂದ ಗೃಹ ಹಾಗೂ ವಾಹನ ಸಾಲದ ಇಎಂಐ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ. ಮಧ್ಯಮ ಆರ್ಥಿಕ ಸ್ಥಿರತೆ ಮತ್ತು ಆರ್ಥಿಕ ಬೆಳವಣಿಗೆ ಬಗ್ಗೆ ನಿಗಾ ಇರಿಸಿದ್ದು, ಹಣದುಬ್ಬರವನ್ನು ಪರಿಶೀಲಿಸಲಾಗುತ್ತಿದೆ ಎಂದು ಆರ್.ಬಿ.ಐ. ಗವರ್ನರ್ ಶಕ್ತಿಕಾಂತ್ ದಾಸ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಭಾರತದ ಹಣದುಬ್ಬರವನ್ನು ಶೇ. 4ಕ್ಕೆ ಇಳಿಕೆ ಮಾಡುವ ಪ್ರಸ್ತಾವನೆಗೆ ಹಣಕಾಸು ನೀತಿ ಸಮಿತಿ ಬದ್ಧವಾಗಿದೆ ಎಂದು ದಾಸ್ ಈ ಸಂದರ್ಭದಲ್ಲಿ ಹೇಳಿದರು. ಬುಧವಾರ ಆರಂಭಗೊಂಡಿದ್ದ ಮೂರು ದಿನಗಳ ಆರ್.ಬಿ.ಐ.ನ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿರುವುದಾಗಿ ದಾಸ್ ತಿಳಿಸಿದರು.
ಏಪ್ರಿಲ್, ಜೂನ್ ಹಾಗೂ ಆಗಸ್ಟ್ ನಲ್ಲಿ ನಡೆದ ಆರ್.ಬಿ.ಐ.ನ ಹಣಕಾಸು ನೀತಿ ಸಮಿತಿಯ ಸಭೆಯಲ್ಲಿ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ, ಯಥಾಸ್ಥಿತಿ ಕಾಯ್ದುಕೊಂಡಿತ್ತು. ಈ ಬಾರಿಯೂ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಜುಲೈ ತಿಂಗಳಿನಲ್ಲಿ ಗೋಧಿ, ಅಕ್ಕಿ, ತರಕಾರಿ, ಟೊಮೆಟೊ ಬೆಲೆ ಏರಿಕೆಯ ಪರಿಣಾಮ ಭಾರತದ ಹಣದುಬ್ಬರ ಶೇ. 7.8ಕ್ಕೆ ಏರಿಕೆಯಾಗಿತ್ತು. ಬಳಿಕ ಆಗಸ್ಟ್ ತಿಂಗಳಿನಲ್ಲಿ ಶೇ. 6.8ಕ್ಕೆ ಇಳಿಕೆಯಾಗಿತ್ತು. ಸೆಪ್ಟೆಂಬರ್ ತಿಂಗಳ ಹಣದುಬ್ಬರದ ಅಂಕಿಅಂಶ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.