ಸುಳ್ಯ: ಸೌಜನ್ಯ ಪ್ರಕರಣದ ಫ್ಲೆಕ್ಸನ್ನು ಅನುಮತಿ ಪಡೆದೇ ಸುಳ್ಯ ಪೇಟೆಯಲ್ಲಿ ಅಳವಡಿಸಿದ್ದರೂ, ಪೊಲೀಸರೇ ಮುಂದೆ ಬಂದು ಫ್ಲೆಕ್ಸ್ ತೆರವುಗೊಳಿಸಿದ್ದಾರೆ. ಇದು ಸೌಜನ್ಯ ಹೋರಾಟವನ್ನು ಹತ್ತಿಕ್ಕುವ ಷಡ್ಯಂತ್ರ ಎಂದು ಆರೋಪಿಸಿರುವ ಸೌಜನ್ಯ ಪ್ರಕರಣ ಒಕ್ಕಲಿಗರ ಜಿಲ್ಲಾ ಹೋರಾಟ ಸಮಿತಿ, ಫ್ಲೆಕ್ಸ್ ತೆರವಿಗೆ ಕಾರಣವಾದ ಅಧಿಕಾರಿಯನ್ನು ತಕ್ಷಣ ಅಮಾನತು ಮಾಡಬೇಕು ಎಂದು ಎಸ್.ಪಿ. ರಿಷ್ಯಂತ್ ಸಿ.ಬಿ. ಅವರನ್ನು ಒತ್ತಾಯಿಸಿದೆ.
ಸುಳ್ಯ ಪೇಟೆಯಲ್ಲಿ ಸೌಜನ್ಯ ಪ್ರಕರಣದ ನ್ಯಾಯಕ್ಕಾಗಿ ಫ್ಲೆಕ್ಸ್ ನ್ನು ಅನುಮತಿ ಪಡೆದು ಅಳವಡಿಸಲಾಗಿತ್ತು. ಆದರೆ ಇಂದು ಸುಳ್ಯಕ್ಕೆ ಕಾರ್ಯಕ್ರಮ ನಿಮಿತ್ತ ರಾಜ್ಯಸಭಾ ಸದಸ್ಯರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಬರುವ ಕಾರಣ ಉದ್ದೇಶ ಪೂರ್ವಕವಾಗಿ ಬೆಳಿಗ್ಗೆ ನಗರ ಪಂಚಾಯತ್ ನವರು ಫ್ಲೆಕ್ಸನ್ನು ತೆರವುಗೊಳಿಸಿದ್ದಾರೆ. ಅನುಮತಿ ಪಡೆದಿರುವ ದಾಖಲಾತಿಯನ್ನು ಲಗತ್ತಿಸಿದ್ದರೂ, ಉದ್ದೇಶ ಪೂರ್ವಕವಾಗಿ ನಮ್ಮ ಹೋರಾಟವನ್ನು ಹತ್ತಿಕ್ಕುವಂತಹ ಪ್ರಯತ್ನವನ್ನು ಮಾಡಲಾಗಿದೆ. ಇದನ್ನು ಒಕ್ಕಲಿಗರ ಹೋರಾಟ ಸಮಿತಿ ತೀವ್ರವಾಗಿ ಖಂಡಿಸುತ್ತೇವೆ. ಈ ಬಗ್ಗೆ ವಿಚಾರಣೆ ನಡೆಸಿ ಸಂಬಂಧಪಟ್ಟ ಪೊಲೀಸ್ ಅಧಿಕಾರಿಯನ್ನು ಕೂಡಲೇ ಅಮಾನತುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಮಿತಿ ಒತ್ತಾಯಿಸಿದೆ.
ಈ ವಿಷಯದ ಕುರಿತು ಸೌಜನ್ಯ ಪ್ರಕರಣ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷರು ಸುಳ್ಯ ಠಾಣೆಯ ಎಸ್.ಐ. ಅವರಿಗೆ ಕರೆ ಮಾಡಿ, ಪಂಚಾಯಿತಿಯಿಂದ ಅನುಮತಿ ಪಡೆದೇ ನಾವು ಬ್ಯಾನರ್ ಅಳವಡಿಸಿದ್ದೇವೆ. ಅಲ್ಲದೆ ಅ. 8ರ ತನಕ ಬ್ಯಾನರ್ ಅಳವಡಿಸಲು ಅನುಮತಿ ಪಡೆದಿದ್ದೇವೆ. ಹಾಗಿದ್ದು, ಬ್ಯಾನರ್ ತೆರವು ಮಾಡಿದ್ದು, ಹಗರಣಗಳಿಗೆ ಪೊಲೀಸರೇ ಕಾರಣ ಎನ್ನುವುದು ಇದರಿಂದ ತಿಳಿಯುತ್ತದೆ ಎಂದು ಆಪಾದಿಸಿದ್ದಾರೆ.