ಮೌಲ್ಯಗಳನ್ನು ನಿರ್ಮಾಣ ಮಾಡುವ ಕಾರ್ಯ ಆಗಬೇಕಿದೆ : ಚಿದಾನಂದ ಬೈಲಾಡಿ | ಅಂಬಿಕಾ ಕಾಲೇಜಿನ ಎನ್.ಎಸ್.ಎಸ್. ತಂಡದಿಂದ ನಗರದಲ್ಲಿ ಜಾಗೃತಿ ಅರಿವು

ಪುತ್ತೂರು: ನಾವಿಂದು ಚಂದ್ರಲೋಕಕ್ಕೂ ಅಡಿಯಿಡುವ ಯೋಗ್ಯತೆಯನ್ನು ಸಂಪಾದಿಸಿದ್ದೇವೆ. ಆದರೆ ಪಕ್ಕದ ಮನೆಗೆ ಹೋಗಲಾರದಷ್ಟು ಸಮಯಹೀನರಾಗಿದ್ದೇವೆ. ಮನುಷ್ಯನ ಮೌಲ್ಯಗಳು ಹಂತಹoತವಾಗಿ ಕುಸಿಯುತ್ತಿವೆ. ಆದ್ದರಿಂದ ನಿರ್ನಾಮವಾಗುತ್ತಿರುವ ಮೌಲ್ಯಗಳನ್ನು ನಿರ್ಮಾಣ ಮಾಡುವ ಕಾರ್ಯ ಆಗಬೇಕಿದೆ. ನಮ್ಮ ಸುತ್ತಲಿನ ಪರಿಸರವನ್ನು ಚೆನ್ನಾಗಿ ರೂಪಿಸುವ ಗುಣವನ್ನು ಬೆಳೆಸಿಕೊಳ್ಳಬೇಕಿದೆ ಎಂದು ಹಿರಿಯ ನ್ಯಾಯವಾದಿ ಚಿದಾನಂದ ಬೈಲಾಡಿ ಹೇಳಿದರು.

ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ಆಯೋಜಿಸಲಾದ ಸ್ವಚ್ಚ ಭಾರತ – ಜಾಗೃತಿ ಅರಿವು ಕಾರ್ಯಕ್ರಮವನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಉದ್ಘಾಟಿಸಿ ಮಾತನಾಡಿದರು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ ಮುಳಿಯ ಮಾತನಾಡಿ, ಕಸದ ಬಗೆಗೆ ತೀವ್ರವಾದ ಜಾಗೃತಿಯನ್ನು ನಾವು ಜಾರಿಗೊಳಿಸಬೇಕಿದೆ. ಇಂದಿಗೂ ನಮ್ಮ ಮನೆ ಮುಂದಿನ ಕಸ ತೆಗೆಯುವುದಕ್ಕೆ ಮತ್ಯಾರೋ ಬರಬೇಕು ಎಂಬ ಭಾವನೆಯಿಂದ ಇರುವ ಜನ ಅನೇಕರಿದ್ದಾರೆ. ಎಳೆಯ ವಯಸ್ಸಿನಿಂದಲೇ ಮಕ್ಕಳಲ್ಲಿ ಕಸ ವಿಲೇವಾರಿಯ ಬಗೆಗೆ ಜಾಗೃತಿ ಮೂಡಿಸಿದಲ್ಲಿ ಅದು ಪರಿಣಾಮಕಾರಿಯೆನಿಸುತ್ತದೆ. ಸ್ವತಃ ಶ್ರಮದಾನದ ಮೂಲಕ ಕಸ ಹೆಕ್ಕುವ ಜತೆಗೆ ಆ ಬಗೆಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಅಗತ್ಯವಾಗಿ ಬೇಕಿವೆ ಎಂದರು.



































 
 

ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ಮುಂದಿನ ಶತಮಾನಗಳನ್ನು ಆಳಲಿರುವ ಭಾರತವನ್ನು ನಾವು ಸುಂದರವಾಗಿ ರೂಪಿಸಬೇಕಿದೆ. ದೇಶ ನನ್ನದು ಎಂಬ ಭಾವನೆಯಿಂದ ವ್ಯವಹರಿಸಿದಾಗ ಕಸಕಡ್ಡಿಗಳನ್ನು ವಿಲೇವಾರಿ ಮಾಡಬೇಕೆಂಬ ಸ್ಪೂರ್ತಿ ತನ್ನಿಂದ ತಾನಾಗಿ ಮೂಡಿಬರುತ್ತದೆ. ದೇಶವನ್ನು ದೇವಿ ಎಂದು ಆರಾಧಿಸುವ ಜನ ನಾವು. ಆದರೆ ಆ ದೇವಿಯ ಮೈಯ ಮೇಲೆ ನಾವು ಮಾಡಬಾರದ ಅನಾಚಾರಗಳನ್ನು ಮಾಡುತ್ತಿರುವುದು ಅಕ್ಷಮ್ಯ ನಮ್ಮನ್ನು ನಾವು ತಿದ್ದಿಕೊಳ್ಳುವುದು ತುಂಬಾ ಅಗತ್ಯ ಎಂದು ನುಡಿದರು.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ ಪ್ರಸಾದ ಎ, ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾAತ ಗೋರೆ, ರಾಷ್ಟ್ರೀಯ ಸೇವಾ ಯೋಜನೆಯ ನಿರ್ದೇಶಕ ಹರ್ಷಿತ್ ಪಿಂಡಿವನ, ಅಂಬಿಕಾ ವಿದ್ಯಾಲಯದ ಸ್ಕೌಟ್ ತಂಡ, ಬೋಧಕ ಬೋಧಕೇತರ ವೃಂದ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಜಾಗೃತಿ ಅರಿವು ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಾದ ಪಂಚಮಿ ಬಾಕಿಲಪದವು. ಅಂಕಿತಾ, ಚೈತನ್ಯಾ ಸಿ., ಅಕ್ಷಿತಾ, ಪ್ರದ್ಯುಮ್ನ, ಆದಿತ್ಯ ಕೃಷ್ಣ, ದೀಪಾ ಹಾಗೂ ಶರಣ್ಯಾ ರೈ ಅರಿವು ಕಾರ್ಯಕ್ರಮವನ್ನು ಪ್ರಸ್ತುತಗೊಳಿಸಿದರು.

ವಿದ್ಯಾರ್ಥಿ ಸಂಘದ ಅಧ್ಯಕ್ಷ ನವನೀತ್ ಹಾಗೂ ಕಾರ್ಯದರ್ಶಿ ಪ್ರಿಯಾಲ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಮುಂಭಾಗ, ಆದರ್ಶ ಆಸ್ಪತ್ರೆ ಬಳಿ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಬಳಿ, ಬಸ್ ನಿಲ್ದಾಣ ಬಳಿಯ ಗಾಂಧಿ ಕಟ್ಟೆ ಬಳಿ, ಅರುಣಾ ಟಾಕೀಸ್ ಬಳಿ, ದರ್ಬೆ ಸರ್ಕಲ್ ಬಳಿ, ಸುಳ್ಯ ಸರ್ಕಲ್ ಬಳಿ, ಅಮರ್ ಜವಾನ್ ಜ್ಯೋತಿ ಬಳಿ, ಪೋಸ್ಟ್ ಆಫೀಸ್ ಬಳಿ, ಬೊಳುವಾರು ಜೋಡು ರಸ್ತೆ ಬಳಿ, ಬೈಪಾಸ್ ರಸ್ತೆ ಬಳಿ, ಸುದಾನ ಶಾಲೆಯ ಎದುರು, ನೆಹರುನಗರದ ಬಳಿ, ಬನ್ನೂರು ಹಾಗೂ ಪಡೀಲುಗಳಲ್ಲಿ ಈ ಜಾಗೃತಿ ಅರಿವು ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಾಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top