ಮಂಗಳೂರು: ಥಾಯ್ಲೆಂಡ್ ನಲ್ಲಿ ನಡೆದ ಮಿಸ್ ಟೀನ್ ಗ್ಲೋಬ್ ಇಂಟರ್ ನ್ಯಾಷನಲ್ 2023 ಕಿರೀಟವನ್ನು ಕರ್ನಾಟಕದ ಕುವರಿ ಮಂಗಳೂರು ಬೆಡಗಿ ಯಶಸ್ವಿನಿ ದೇವಾಡಿಗ ತನ್ನ ಮುಡಿಗೇರಿಸಿಕೊಂಡಿದ್ದಾರೆ.
ವರ್ಷದ ಆರಂಭದಲ್ಲಿ ನಡೆದ ಮಿಸ್ ಟೀನ್ ಇಂಡಿಯಾ ಗ್ಲೋಬ್ ಬ್ಯೂಟಿ ಕಾಂಟೆಸ್ಟ್ ನಲ್ಲಿ ಸ್ಪರ್ಧಿಸಿ ರನ್ನರ್ ಅಪ್ ಪ್ರಶಸ್ತಿ ಪಡೆದು, ಥಾಯ್ಲೆಂಡ್ ನಲ್ಲಿ ನಡೆದ ಫೈನಲ್ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದರು. ಇದೀಗ ಯಶಸ್ವಿನಿ ದೇವಾಡಿಗ ಅವರು ಮಿಸ್ ಟೀನ್ ಗ್ಲೋಬ್ ಇಂಟರ್ ನ್ಯಾಷನಲ್ 2023 ಆಗಿ ಹೊರಹೊಮ್ಮಿದರು.
ಇಂಡೋನೇಷ್ಯಾದ ಫೆಬ್ರಿ ಮಸೀತಿಯಾ ಹಾಗೂ ಮಲೇಷ್ಯಾದ ವಿನಿಷಾ ವಿಜಯನ್ ಅವರನ್ನು ಹಿಂದಿಕ್ಕಿ ಯಶಸ್ವಿನಿ ದೇವಾಡಿಗ ಕಿರೀಟ ತನ್ನದಾಗಿಸಿಕೊಂಡರು.
ಬಾಲ್ಯದಿಂದಲೇ ಫ್ಯಾಷನ್, ಮಾಡೆಲಿಂಗ್ ಜಗತ್ತಿನ ಕಡೆಗೆ ಆಕರ್ಷಿತರಾಗಿದ್ದ ಯಶಸ್ವಿನಿ ಅವರು ನೃತ್ಯ, ಏಕಪಾತ್ರಾಭಿನಯ ಮೊದಲಾದ ಕಲಾ ಕ್ಷೇತ್ರಗಳಲ್ಲಿ ಸಹ ಗುರುತಿಸಿಕೊಂಡಿದ್ದಾರೆ.
ಹೈದರಾಬಾದಿನಲ್ಲಿ ಈ ವರ್ಷದ ಮೇ ತಿಂಗಳಲ್ಲಿ ನಡೆದ ಮಿಸ್ ಟೀನ್ ಇಂಡಿಯಾ ಗ್ಲೋಬ್ ಬ್ಯೂಟಿ ಕಾಂಟೆಸ್ಟ್ ನಲ್ಲಿ ಯಶಸ್ವಿನಿ ಭಾಗವಹಿಸಿದ್ದರು. ಇಲ್ಲಿ ನಡೆದ 6 ಸುತ್ತಿನ ಸ್ಪರ್ಧೆಯಲ್ಲಿ ಪರಿಚಯ, ಪ್ರತಿಭಾ ಪ್ರದರ್ಶನ, ಸಂದರ್ಶನ, ನ್ಯಾಷನಲ್ ಕಾಸ್ಟ್ಯೂಮ್ ರೌಂಡ್, ಗೌನ್ ಮತ್ತು ಪ್ರಶ್ನೋತ್ತರ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.
ಭಾರತದಲ್ಲಿ ನಡೆದ ಸ್ಪರ್ಧೆಯಲ್ಲಿ 50 ಸ್ಪರ್ಧಿಗಳಲ್ಲಿ 49 ಸ್ಪರ್ಧಿಗಳನ್ನು ಹಿಂದಿಕ್ಕಿ, ಮೊದಲ ರನ್ನರ್ ಅಪ್ ಪ್ರಶಸ್ತಿ ಪಡೆದಿದ್ದರು. ಜೊತೆಗೆ ಫೇಸ್ ಆಫ್ ಕರ್ನಾಟಕ ಪ್ರಶಸ್ತಿ ಕೂಡ ಮುಡಿಗೇರಿಸಿಕೊಂಡಿದ್ದರು. ಅಲ್ಲಿಂದ ನೇರವಾಗಿ ಇವರು ಅಂತಾರಾಷ್ಟ್ರೀಯ ಮಟ್ಟದ ಬ್ಯೂಟಿ ಕಾಂಟೆಸ್ಟ್ ನಲ್ಲಿ ಸ್ಪರ್ಧಿಸಲು ಆಯ್ಕೆಯಾಗಿದ್ದರು.
ಮಂಗಳೂರಿನವರಾದ ಯಶಸ್ವಿನಿ ದೇವಾಡಿಗ ಅವರು ದೇವದಾಸ್ ಕುಳಾಯಿ ಮತ್ತು ಮೀನಾಕ್ಷಿ ಕುಳಾಯಿ ದಂಪತಿ ಪುತ್ರಿ. ಸದ್ಯ ಈಕೆ ಸುರತ್ಕಲ್ ನ ಗೋವಿಂದ ದಾಸ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ. ನವೀನ್ ಬಿಲ್ಲವ ತರಬೇತಿ ನೀಡಿದ್ದಾರೆ.