ಹರಾರೆ: ಖಾಸಗಿ ವಿಮಾನ ಪತನಗೊಂಡು ಭಾರತೀಯ ಗಣಿ ಉದ್ಯಮಿ, ಪುತ್ರ ಸೇರಿ 6 ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆ ನೈಋತ್ಯ ಜಿಂಬಾಬ್ವೆಯಲ್ಲಿ ನಡೆದಿರುವುದು ವರದಿಯಾಗಿದೆ.
ಚಿನ್ನ, ಕಲ್ಲಿದ್ದಲು ಮತ್ತು ತಾಮ್ರವನ್ನು ಸಂಸ್ಕರಿಸುವ ರಿಯೋಜಿಮ್ ಗಣಿ ಕಂಪನಿಯ ಮಾಲೀಕ ಹರ್ಪಾಲ್ ರಾಂಧವಾ, ಅವರ ಮಗ ಮತ್ತು ಇತರ ನಾಲ್ವರು ವಿಮಾನ ಅಪಘಾತದಲ್ಲಿ ಮೃತಪಟ್ಟಿರುವುದಾಗಿ ʼಪಿಟಿಐʼ ವರದಿ ಮಾಡಿದೆ.
ರಿಯೊಜಿಮ್ ಒಡೆತನದ ಸೆಸ್ನಾ 206 ವಿಮಾನವು ಶುಕ್ರವಾರ (ಸೆ. 29ರಂದು) ಹರಾರೆಯಿಂದ ಜಿಂಬಾಬ್ಬೆಯ ಮುರೊವಾ ವಜ್ರದ ಗಣಿ ಕಡೆಗೆ ತೆರಳುತ್ತಿದ್ದಾಗ ಈ ದುರಂತ ಘಟನೆ ಸಂಭವಿಸಿದೆ ಎಂದು ಜಿಂಬಾಬ್ಬೆಯ ʼಐ ಹರಾರೆʼ ವರದಿ ಮಾಡಿದೆ.
ಜ್ವಾಮಹಂಡೆ ಪ್ರದೇಶದಲ್ಲಿ ರಿಯೊಝಿಮ್ನ ಶೇರ್ ಒಡೆತನದಲ್ಲಿರುವ ಮುರೊವಾ ಡೈಮಂಡ್ಸ್ ಗಣಿ ಬಳಿ ಸಿಂಗಲ್ ಇಂಜಿನ್ ವಿಮಾನವು ಪತನಗೊಂಡಿದೆ.
ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಹಾರಾಟ ನಡೆಸುತ್ತಿರುವಾಗಲೇ ಜ್ವಾಮಹಂಡೆ ಪ್ರದೇಶದ ಪೀಟರ್ ಫಾರ್ಮ್ ಹೋಗಿ ಬಿದ್ದಿದೆ. ಪರಿಣಾಮ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಮೃತಪಟ್ಟವರಲ್ಲಿ ನಾಲ್ವರು ವಿದೇಶಿಗರು ಮತ್ತು ಇತರ ಇಬ್ಬರು ಜಿಂಬಾಬ್ವೆಯನ್ನರು ಎಂದು ಪೊಲೀಸರ ಹೇಳಿಕೆಯನ್ನು ಉಲ್ಲೇಖಿಸಿ ಸರ್ಕಾರಿ ಸ್ವಾಮ್ಯದ ದಿನಪತ್ರಿಕೆಯಾದ ಹೆರಾಲ್ಡ್ ವರದಿ ಮಾಡಿದೆ.