ಪುತ್ತೂರು: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಗಾಂಧಿಕಟ್ಟೆ ಸಮಿತಿ, ರೋಟರಿ ಕ್ಲಬ್ ಸಂಸ್ಥೆಗಳು ಹಾಗೂ ಜೆಸಿಐ ಆಶ್ರಯದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಜಯಂತಿ ಆಚರಣೆ ಬಸ್ ನಿಲ್ದಾಣದ ಬಳಿ ಇರುವ ಗಾಂಧಿಕಟ್ಟೆಯಲ್ಲಿ ಸೋಮವಾರ ನಡೆಯಿತು.
ಶಾಸಕ ಅಶೋಕ್ ಕುಮಾರ್ ರೈ ಗಾಂಧೀ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ, ತೋರಿಕೆಯಿಂದ ಸ್ವಚ್ಛತೆ ಸಾಧ್ಯವಿಲ್ಲ. ಕೇವಲ ಭಾಷಣಕ್ಕೆ ಮಾತ್ರ ಸ್ವಚ್ಛತೆ ಸೀಮಿತವಾಗಿರದೆ ಮನಸ್ಸಿನಲ್ಲಿ ಬಾದಲಾವಣೆ ತಂದರೆ ದೇಶದ ಸ್ವಚ್ಛತೆ ಸಾಧ್ಯ ಎಂದ ಅವರು, ಹಲವಾರು ಚಳವಳಿ ಮೂಲಕ ಬ್ರಿಟಿಷರನ್ನು ಭಾರತದಿಂದ ತೊಲಗಿಸಿ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಹೋರಾಟ ಮಾಡಿದ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರು ಶಾಸ್ತ್ರಿ ಈ ಎರಡು ಮಹಾ ವ್ಯಕ್ತಿಗಳು ಹಾಕಿದ ಹೆಜ್ಜೆಯನ್ನು ನಮ್ಮ ಜೀವನದಲ್ಲಿ ಅಳವಡಿಸಕೊಳ್ಳಬೇಕಾದ ಅಗತ್ಯವಿದೆ ಎಂದರು.
ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಸಹಾಯಕ ಆಯುಕ್ತ ಗಿರೀಶ್ ನಂದನ್ ಮಾತನಾಡಿ, ಶಾಂತಿಯನ್ನು ವಿಶ್ವಕ್ಕೆ ಪ್ರತಿಪಾದಿಸಿದ ಮಹಾನ್ ವ್ಯಕ್ತಿ ಮಹಾತ್ಮಾ ಗಾಂಧಿ. ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಜಯಂತಿ ಆಚರಣೆ ಮಾಡಲಾಗುತ್ತಿದೆ. ಹಾಗೆಯೇ ಜೈ ಜವಾನ್, ಕೈ ಕಿಸಾನ್ ಸ್ಲೋಗನ್ ನೀಡಿದ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಆದರ್ಶಗಳನ್ನೂ ನಮ್ಮ ಜೀವನದಲ್ಲಿ ಅಳವಡಿಸಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಶಿವಶಂಕರ್, ರೋಟರಿ ಕ್ಲಬ್ ಅಧ್ಯಕ್ಷ ಜೈರಾಜ್ ಭಂಡಾರಿ, ರೋಟರಿ ಯುವ ಅಧ್ಯಕ್ಷ ಪಶುಪತಿ ಶರ್ಮ, ಸೆಂಟ್ರಲ್ ಅಧ್ಯಕ್ಷ ರಾಜೇಶ್ ಬೆಜ್ಜಂಗಳ, ಜೆಸಿಐ ಅಧ್ಯಕ್ಷ ಸುಹಾಸ್ ಮರಿಕೆ, ಶಿಕ್ಷಣ ಸಂಯೋಜಕ ಹರಿಪ್ರಸಾದ್, ಸುಂದರ ರೈ ಪಾಲ್ಗೊಂಡು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಸರ್ವಧರ್ಮ ಪ್ರಾರ್ಥನೆ ನಡೆಯಿತು. ಗಾಂಧೀಜಿ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪುತ್ತೂರು ನಗರಸಭೆಯಲ್ಲಿ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸಿದ ಹಿರಿಯ ಪೌರ ಕಾರ್ಮಿಕರಾದ ದಯಾನಂದ, ಸೀತಾ, ಗುಲಾಬಿ ಅವರನ್ನು ಸನ್ಮಾನಿಸಲಾಯಿತು.
ಗಾಂಧೀಕಟ್ಟೆ ಸಮಿತಿ ಸಂಚಾಲಕ ಕೃಷ್ಣಪ್ರಸಾದ್ ರೈ ಸ್ವಾಗತಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಸೈನಿಕ ರಮೇಶ್ ಬಾಬು ವಂದಿಸಿದರು.