ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಗಳಿಂದ ಸ್ವಚ್ಛತಾ ಅಭಿಯಾನ, ಬೀದಿ ನಾಟಕ, ಜಾಥಾ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ಸಂಘ, ಎನ್‌.ಸಿ.ಸಿ.ಯ ಭೂದಳ ಮತ್ತು ನೌಕಾದಳ, ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಹಾಗೂ ಇಕೋ ಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ ಸ್ವಚ್ಛತಾ ಅಭಿಯಾನ ಭಾನುವಾರ ನಡೆಯಿತು.

ನಗರಸಭೆ ಪೌರಾಯುಕ್ತ ಮಧು ಎಸ್. ಮನೋಹರ್ ಸ್ವಚ್ಛತಾ ಅಭಿಯಾನ ಉದ್ಘಾಟಿಸಿ ಮಾತನಾಡಿ, ಸ್ವಚ್ಛ ಭಾರತ ಗಾಂಧೀಜಿಯವರ ಕನಸಾಗಿತ್ತು. ಸ್ವಚ್ಛತೆ ನಮ್ಮ ಮನೆ ಪರಿಸರ ಗ್ರಾಮದಿಂದ ಪ್ರಾರಂಭವಾಗಬೇಕು. ಪರಿಸರವನ್ನು ಸ್ವಚ್ಛವಾಗಿರಿಸುವುದು ಪ್ರತಿಯೋರ್ವ ನಾಗರಿಕನ ಕರ್ತವ್ಯವಾಗಿದೆ. ಕೇಂದ್ರ ಸರಕಾರವು ಸ್ವಚ್ಛತೆಗೆ ಹಲವು ಮಾನದಂಡಗಳನ್ನು ನಿಯೋಜಿಸಿದೆ. ಅವುಗಳನ್ನೆಲ್ಲ ಪಾಲಿಸಿದ್ದೇ ಆದರೆ ಸ್ವಚ್ಛತೆಯಲ್ಲಿ ನಮ್ಮ ನಗರಸಭೆಯು ರಾಜ್ಯದಲ್ಲಿ ಮಾತ್ರವಲ್ಲದೆ ದೇಶದಲ್ಲೂ ಪ್ರಥಮ ಸ್ಥಾನಗಳಿಸಬಹುದಾಗಿದೆ. ಪರಿಸರ ನೈರ್ಮಲ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ಸುತ್ತಮುತ್ತಲಿನ ಜನರಿಗೆ ಅರಿವು ಮೂಡಿಸುವ ಈ ಕಾರ್ಯಕ್ರಮ ಶ್ಲಾಘನೀಯ ಎಂದರು

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪಪ್ರಾಂಶುಪಾಲ ಪ್ರೊ| ಗಣೇಶ್‌ ಭಟ್‌ ಕೆ, ಸ್ವಚ್ಛತಾ ಅಭಿಯಾನ, ಸ್ವಚ್ಛತೆ ಮತ್ತು ನೈರ್ಮಲ್ಯಕ್ಕಾಗಿ ನಮ್ಮ ಅಭಿಯಾನ. ಕೆಲವು ವರ್ಷಗಳ ಹಿಂದೆ ಪ್ರಾರಂಭವಾದ ಈ ಅಭಿಯಾನ ನಮ್ಮ ರಾಷ್ಟ್ರವನ್ನು ಪರಿವರ್ತಿಸಲು ಮತ್ತು ನಮ್ಮ ಎಲ್ಲಾ ನಾಗರಿಕರ ಜೀವನದ ಗುಣಮಟ್ಟವನ್ನು ಸುಧಾರಿಸಲು ಒಂದು ಸಾಮೂಹಿಕ ಪ್ರಯತ್ನವಾಗಿದೆ. ಸ್ವಚ್ಛ ಭಾರತವು ಆರೋಗ್ಯಕರ ಮತ್ತು ಸಮೃದ್ಧ ಭಾರತಕ್ಕೆ ಅಡಿಪಾಯವಾಗಿದೆ ಎಂದು ಹೇಳಿದರು.



































 
 

ಈ ಸಂದರ್ಭದಲ್ಲಿ ಗಾಂಧಿ ಜಯಂತಿ ಹಾಗೂ ಪೌರಕಾರ್ಮಿಕ ದಿನಾಚರಣೆಯ ಸಲುವಾಗಿ ಕಾಲೇಜಿನ ವಿವಿಧ ಘಟಕಗಳ ಸಂಯೋಜಕರು ಹಾಗೂ ವಿದ್ಯಾರ್ಥಿಗಳು ಸ್ವಚ್ಛತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾಲೇಜಿನಿಂದ ಪ್ರಾರಂಭಗೊಂಡು ಪುತ್ತೂರು ಬಸ್ ನಿಲ್ದಾಣದವರೆಗೆ ಜಾಥಾವನ್ನು ನಡೆಸಿದರು. ಜಾಥಾದುದ್ದಕ್ಕೂ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಫಲಕಗಳನ್ನು ಪ್ರದರ್ಶಿಸಿ ಘೋಷವಾಕ್ಯಗಳನ್ನು ಉಚ್ಛರಿಸಲಾಯಿತು. ಕಾಲೇಜಿನ ಪ್ರದರ್ಶನ ಕಲಾ ಸಂಘದ ವಿದ್ಯಾರ್ಥಿಗಳು ಪ್ಲಾಸ್ಟಿಕ್‌ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಕಾಲೇಜಿನಲ್ಲಿ, ದರ್ಬೆ ವೃತ್ತದ ಬಳಿ ಹಾಗೂ ಪುತ್ತೂರು ಬಸ್‌ ನಿಲ್ದಾಣದ ಬಳಿ ಬೀದಿ ನಾಟಕ ಪ್ರದರ್ಶಿಸಿದರು. ಕಾಲೇಜಿನ ಪ್ರಾಧ್ಯಾಪಕ ರಾಮಾಂಜಿ ಉಡುಪಿ ಬೀದಿ ನಾಟಕವನ್ನು ನಿರ್ದೇಶಿಸಿದರು.

ಕಾಲೇಜಿನ ಪ್ರಾಚಾರ್ಯ ವಂ| ಡಾ| ಆಂಟೊನಿ ಪ್ರಕಾಶ್‌ ಮೊಂತೆರೋ, ಉಪಪ್ರಾಂಶುಪಾಲರಾದ ಪ್ರೊ|ಗಣೇಶ್‌ ಭಟ್ ಈ ಸಂದರ್ಭದಲ್ಲಿ ಮಾತನಾಡಿದರು.
ನಗರ ಸ್ವಚ್ಛತೆಯನ್ನು ಕಾಪಾಡುವಲ್ಲಿ ಶ್ರಮಿಸುತ್ತಿರುವ ಪೌರಕಾರ್ಮಿಕರಾದ ಉಮಾವತಿ ಹಾಗೂ ಕೃಷ್ಣರವರನ್ನು ಸನ್ಮಾನಿಸಲಾಯಿತು.
ಕಾಲೇಜಿನ ಉಪಪ್ರಾಂಶುಪಾಲ ಡಾ| ಎ ಪಿ ರಾಧಾಕೃಷ್ಣ, ಎನ್‌ ಸಿ ಸಿ ಅಧಿಕಾರಿಗಳಾದ ಲೆಫ್ಟಿನೆಂಟ್‌ ಜಾನ್ಸನ್‌ ಡೇವಿಡ್‌ ಸಿಕ್ವೆ, ತೇಜಸ್ವಿ ಭಟ್, ಎನ್‌ ಎಸ್‌ ಎಸ್‌ ಕಾರ್ಯಕ್ರಮಾಧಿಕಾರಿ ಪುಷ್ಪ ಎನ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಧ್ಯಾಪಕರಾದ ಡಾ| ಮಾಲಿನಿ ಕೆ, ಡಾ| ವಿಜಯ ಕುಮಾರ್‌ ಎಂ, ಡಾ| ನೋರ್ಬರ್ಟ್‌ ಮಸ್ಕರೇಞಸ್‌, ಭಾರತಿ ಎಸ್‌ ರೈ, ಸ್ಮಿತಾ ವಿವೇಕ್‌ ಹಾಗೂ ಶ್ರೀರಕ್ಷಾ ಮತ್ತು ಆಡಳಿತ ಸಿಬ್ಬಂದಿ ಅನಿಲ್‌ ಲಸ್ರಾದೋ ಹಾಗೂ ವಿನಿಲ್‌ ಮತ್ತು ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡರು. ಪ್ರಾಪ್ತಿ ಮತ್ತು ಬಳಗ ಪ್ರಾರ್ಥಿಸಿದರು. ಎನ್ಎಸ್ಎಸ್‌ ಕಾರ್ಯಕ್ರಮಾಧಿಕಾರಿ ವಾಸುದೇವ ಎನ್. ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರಾಜೇಶ್ವರಿ ಎಂ. ವಂದಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ| ಚಂದ್ರಶೇಖರ್‌ ಕೆ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top