ಪುತ್ತೂರು: ಪುತ್ತೂರಿನಂತ ಗ್ರಾಮೀಣ ಭಾಗದಲ್ಲಿ ಅಂತರರಾಷ್ಟ್ರೀಯ ಕ್ರೀಡಾಪಟುಗಳಿರುವುದು ಅಭಿನಂದನಾರ್ಹ ಮತ್ತು ಕಬಡ್ಡಿ ಕ್ರೀಡಾಪಟುಗಳನ್ನು ಸೃಷ್ಟಿಸಿದ ಅಮೆಚೂರು ಕಬಡ್ಡಿ ಎಸೋಸಿಯೇಶನ್ ಸೇವೆ ಶ್ಲಾಘನೀಯ ಎಂದು ಶಾಸಕ ಅಶೋಕ್ ರೈ ಹೇಳಿದರು.
ಶನಿವಾರ ಪುತ್ತೂರು ಕಿಲ್ಲೆ ಮೈದಾನದಲ್ಲಿ ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಎಸೋಸಿಯೇಶನ್, ದ.ಕ. ಜಿಲ್ಲಾ ಅಮೆಚೂರು ಕಬಡ್ಡಿ ಎಸೋಸಿಯೇಶನ್ ಹಾಗೂ ಪುತ್ತೂರು ತಾಲೂಕು ಅಮೆಚೂರು ಕಬಡ್ಡಿ ಎಸೋಸಿಯೇಶನ್ ಆಶ್ರಯದಲ್ಲಿ ನಡೆದ ಆಹ್ವಾನಿತ ತಂಡಗಳ ಪುರುಷರ ವಿಭಾಗದ ಮ್ಯಾಟ್ ಅಂಕಣದ ಪ್ರೋ ಮಾದರಿಯ ಅಹರ್ನಿಶಿ ಕಬಡ್ಡಿ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪ್ರಶಾಂತ್ ಕೈಕಾರ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪುತ್ತೂರಿನ ಪ್ರತಿಭೆಗಳು ಇನ್ನೂ ಒಂದಿಷ್ಟು ಸಾಧನೆಗಳನ್ನು ಮಾಡುವ ಮೂಲಕ ಪುತ್ತೂರಿನ ಹೆಸರನ್ನು ಹತ್ತೂರಿಗೆ ಪಸರಿಸಲಿ. ಕ್ರೀಡೆಯಲ್ಲಿ ಉದ್ಯೋಗ ಅವಕಾಶಗಳು ದೊರೆಯಲಿದ್ದು, ಕ್ರೀಡಾ ಆಸಕ್ತರು ಕ್ರೀಡೆಯಲ್ಲಿ ಸಾಧನೆ ಮಾಡಿದ್ದಲ್ಲಿ ಮುಂದಿನ ಭವಿಷ್ಯ ಗಟ್ಟಿಗೊಳಿಸುವಲ್ಲಿ ಸಹಕಾರಿಯಾಗಲಿದೆ ಎಂದು ಹೇಳಿದರು.
ಪುತ್ತೂರುಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಸಮಾರಂಭ ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ವಿಶ್ವನಾಥ ರೈ, ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಅಧ್ಯಕ್ಷ ಡಾ. ರಾಜಾರಾಮ ಕೆ.ಬಿ., ಬಿಜೆಪಿ ಮುಖಂಡರಾದ ಚನಿಲ ತಿಮ್ಮಪ್ಪ ಶೆಟ್ಟಿ, ಬೂಡಿಯಾರ್ ರಾಧಾಕೃಷ್ಣ ರೈ, ಕಾಂಗ್ರೆಸ್ ಜಿಲ್ಲಾ ವಕ್ತಾರ ಮುರಳೀಧರ ರೈ ಮಠಂತಬೆಟ್ಟು, ಉದ್ಯಮಿ, ಪಂದ್ಯಾಟ ಸಮಿತಿ ಗೌರವಾಧ್ಯಕ್ಷ ಶಿವರಾಮ ಆಳ್ವ, ಉದ್ಯಮಿ ಸುದೇಶ ಶೆಟ್ಟಿ, ಪುತ್ತೂರು ತಾಲೂಕು ಅಮೆಚೂರ್ ಕಬಡ್ಡಿ ಎಸೋಸಿಯೇಶನ್ ಅಧ್ಯಕ್ಷ ಸುರೇಂದ್ರ ರೈ ಬಳ್ಳಮಜಲು, ಕಾರ್ಯದರ್ಶಿ ದಯಾನಂದ ರೈ ಕೋರ್ಮಂಡ ಮತ್ತಿತರರು ಉಪಸ್ಥಿತರಿದ್ದರು.
ಪುತ್ತೂರು ತಾಲೂಕು ಅಮೆಚೂರ್ ಕಬಡ್ಡಿ ಎಸೋಸಿಯೇಶನ್ ಗೌರವಾಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.