ಪುತ್ತೂರು: ದೇಶದಾದ್ಯಂತ ನಡೆಯುವ ’ನನ್ನ ಮಣ್ಣು ನನ್ನ ದೇಶ’ ಮೃತ್ತಿಕೆ ಸಂಗ್ರಹ ಅಭಿಯಾನಕ್ಕೆ ಶನಿವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಚಾಲನೆ ನೀಡಲಾಯಿತು.
ದೇಶಕ್ಕಾಗಿ ಹುತಾತ್ಮರಾದ ಯೋಧರ ತ್ಯಾಗವನ್ನು ಸ್ಮರಿಸಿ ಗೌರವಿಸುವ ಮತ್ತು ದೇಶದ ಏಕತೆಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಅಪೇಕ್ಷೆಯಂತೆ ನಡೆಯುವ ಈ ಕಾರ್ಯಕ್ರಮವನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅವರು ಮೃತ್ತಿಕೆಯನ್ನು ಕಲಶಕ್ಕೆ ಅರ್ಪಣೆ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿ, ದೇಹ ಸರಿ ಇದ್ದಾಗ ದೇಶ, ದೇಶ ಸರಿ ಇದ್ದಾಗ ದೇಹ ಎಂಬಂತೆ ದೇಶದ ಎಲ್ಲಾ ಕಡೆಯಿಂದ ಮೃತ್ತಿಗೆ ಸಂಗ್ರಹವಾಗುವ ರೀತಿಯಲ್ಲಿ ಎಲ್ಲರಲ್ಲೂ ಏಕತೆಯ ಮನೋಭಾವ ಬೆಳೆಯಲಿ. ಜೊತೆಗೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಇರಲಿ ಎಂದರು.
ನನ್ನ ಮಣ್ಣು ನನ್ನ ದೇಶ ಮೃತ್ತಿಕೆ ಸಂಗ್ರಹ ಅಭಿಯಾನದ ಜಿಲ್ಲಾ ಸಂಚಾಲಕ ಸಂತೋಷ್ ಬೋಳಿಯಾರು ಮಾತನಾಡಿ, ದ.ಕ.ಜಿಲ್ಲೆಯಲ್ಲಿ ಸಂಗ್ರಹವಾದ ಮೃತ್ತಿಕೆಯನ್ನು ಮೆರವಣಿಗೆ ಮೂಲಕ ಜಿಲ್ಲೆಗೆ ಸಮರ್ಪಣೆ ಮಾಡಿ, ರಾಜ್ಯಕ್ಕೆ ತಲುಪಿಸಲಾಗುವುದು. ರಾಜ್ಯದಲ್ಲಿ ಸಂಗ್ರಹಿಸಿದ ಮಣ್ಣನ್ನು ದೆಹಲಿಯಲ್ಲಿ ನಿರ್ಮಿಸಲು ಉದ್ದೇಶಿತ ಅಮೃತ ವಾಟಿಕಾ ವನಕ್ಕೆ ಬಳಕೆಯಾಗಲಿದ್ದು, ಪ್ರತಿ ವಾರ್ಡ್ನಲ್ಲಿ ಮಣ್ಣು ಸಂಗ್ರಹದ ಸತ್ಕಾರ್ಯದಲ್ಲಿ ಎಲ್ಲರೂ ತೊಡಗಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದರು.
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಈ ಹಿಂದೆ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆ ನಿರ್ಮಾಣಕ್ಕೂ ಇದೇ ರೀತಿಯಾಗಿ ದೇಶದ ಎಲ್ಲಾ ಕಡೆಯ ಸಹಕಾರ ನೀಡಲಾಗಿದೆ. ಇವತ್ತು ದೇಶದ ಪರಂಪರೆ, ಆಚಾರ, ವಿಚಾರಗಳನ್ನು ಕ್ರೋಡೀಕರಿಸುವ ಕಾರ್ಯ ಆಗುತ್ತಿದೆ. ದೇಶ ರಕ್ಷಿಸುವ ಸೈನಿಕರ ವನಕ್ಕೆ ಇಲ್ಲಿಂದ ಕೂಡ ಮಣ್ಣು ಕಳಿಸುವ ಕೆಲಸ ನಡೆಸಲಾಗುತ್ತಿದೆ. ಇದರು ರಾಜಕೀಯ ರಹಿತ ಕಾರ್ಯಕ್ರಮ ಎಂದರು.
ಗೋಪಾಲಕೃಷ್ಣ ಹೇರಳೆಂ ಪ್ರತಿಜ್ಞಾ ವಿಧಿ ವಿಧಾನ ಬೋಧಿಸಿದರು. ವೇದಿಕೆಯಲ್ಲಿ ರಾಮ್ದಾಸ್ ಬಂಟ್ವಾಳ್, ತಾ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಉಪಸ್ಥಿತರಿದ್ದರು. ಉಷಾ ಮುಳಿಯ ಪ್ರಾರ್ಥಿಸಿದರು. ನನ್ನ ಮಣ್ಣು ನನ್ನ ದೇಶ ಅಭಿಯಾನದ ಪುತ್ತೂರು ವಿಧಾನಸಭಾ ಕ್ಷೇತ್ರದ ಸಂಚಾಲಕ ನಿತೀಶ್ ಶಾಂತಿವನ ಸ್ವಾಗತಿಸಿದರು. ನಗರಸಭೆ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ವಂದಿಸಿದರು. ಪುರುಷೋತ್ತಮ ಮುಂಗ್ಲಿಮನೆ ಕಾರ್ಯಕ್ರಮ ನಿರೂಪಿಸಿದರು.