ಸುಬ್ರಹ್ಮಣ್ಯ: ಅರಣ್ಯ ಇಲಾಖೆ ಮೇ ತಿಂಗಳಿನಿಂದ ಕುಕ್ಕೆ ಸುಬ್ರಹ್ಮಣ್ಯದ ಕುಮಾರ ಪರ್ವತ ಚಾರಣಕ್ಕೆ ಹೇರಿದ್ದ ನಿರ್ಬಂಧವನ್ನು ಇದೀಗ ಮುಕ್ತಗೊಳಿಸಿದೆ.
ಮೇ ತಿಂಗಳಿನಿಂದ ಕುಕ್ಕೆ ಸುಬ್ರಹ್ಮಣ್ಯದಿಂದ ಕುಮಾರ ಪರ್ವತಕ್ಕೆ ಪ್ರತಿ ವರ್ಷ ಚಾರಣಿಗರ ಸಂಖ್ಯೆ ಜಾಸ್ತಿಯಾಗುತ್ತದೆ. ಈ ವರ್ಷ ಮೇ ತಿಂಗಳಿನಿಂದ ಅರಣ್ಯ ಇಲಾಖೆಯವರು ಚಾರಣಕ್ಕೆ ಪ್ರವಾಸಿಗರಿಗೆ /ಚಾರಣಿಗರಿಗೆ ನಿರ್ಬಂಧ ಗೋಳಿಸಿದ್ದರು. ಇದೀಗ ನಿರ್ಬಂಧ ಮುಕ್ತಗೊಳಿಸಿ ಚಾರಣಿಗರಿಗೆ ಅರಣ್ಯ ಇಲಾಖೆಯವರು ಅವಕಾಶ ನೀಡಿರುತ್ತಾರೆ.
ನಿರ್ಬಂಧ ಮುಕ್ತಗೊಳಿಸಿದ ಬೆನ್ನಲ್ಲೇ ಶನಿವಾರ ಬೃಹತ್ ಸಂಖ್ಯೆಯಲ್ಲಿ ಅಂದರೆ ಸುಮಾರು 750ಕ್ಕೂ ಅಧಿಕ ಚಾರಣಿಗರು ಜಮಾಯಿಸಿದ್ದರು. ವಿವಿಧ ಊರುಗಳಿಂದ ಅದರಲ್ಲೂ ಹೆಚ್ಚಾಗಿ ಬೆಂಗಳೂರಿನಿಂದ ಬಂದವರ ಸಂಖ್ಯೆಯೇ ಜಾಸ್ತಿ ಇತ್ತು.
ಚಾರಣಿಗರು ತಮಗೆ ಬೇಕಾದ ಟೆಂಟ್, ಆಹಾರ ಪದಾರ್ಥಗಳು, ನೀರಿನ ಬಾಟಲಿಗಳನ್ನು ತಮ್ಮ ಜೊತೆಯಲ್ಲಿ ಒಯ್ಯುತ್ತಿರುವುದು ಸರ್ವೇಸಾಮಾನ್ಯ. ಚಾರಣ ಸಂದರ್ಭದಲ್ಲಿ ಸ್ವಚ್ಛತೆಯನ್ನು ಕಾಪಾಡಲು ಅರಣ್ಯ ಇಲಾಖೆಯವರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಈ ಕುರಿತು ಅಲ್ಲಲ್ಲಿ ಸೂಚನಾ ಫಲಕಗಳನ್ನು ಕೂಡ ಅಳವಡಿಸಿದ್ದಾರೆ.