ಸುಬ್ರಹ್ಮಣ್ಯ: ಅಂಗಡಿ ಮಾಲಕರೊಬ್ಬರು ನಿಷೇಧದ ನಡುವೆಯೇ ಶಾಲಾ ಕಾಲೇಜು ಬಳಿ ತಂಬಾಕು ಮಾರಾಟ ಮಾಡುತ್ತಿರುವ ಕುರಿತು ಶಾಲಾ ಬಾಲಕಿಯೊಬ್ಬಳು ಮುಖ್ಯಮಂತ್ರಿಗೆ ಕಳುಹಿಸಿದ ಪತ್ರದಿಂದ ಶೀಘ್ರ ಸ್ಪಂದನೆ ದೊರಕಿದೆ.
ಪತ್ರ ತಲುಪಿದ ಸ್ವಲ್ಪ ಹೊತ್ತಿನಲ್ಲೇ ಅಂಗಡಿಗೆ ಪೊಲೀಸರು ದಾಳಿ ನಡೆಸಿದ್ದಾರೆ. ಇದು ಕಡಬ ತಾಲೂಕಿನ ಸುಬ್ರಹ್ಮಣ್ಯ ಬಳಿಯ ಕೈಕಂಬದಲ್ಲಿ ನಡೆದಿದೆ.
ಕೈಕಂಬ ಪಿಲಿಕಜೆ ನಿವಾಸಿ 3ನೇ ತರಗತಿ ವಿದ್ಯಾರ್ಥಿನಿ ಅಯೊರ ಪತ್ರ ಬರೆದ ಬಾಲಕಿ. ಕೆಲ ದಿನಗಳ ಹಿಂದೆ ಪತ್ರಿಕೆಯೊಂದರಲ್ಲಿ ಬಂದಿದ್ದ ಧಾರ್ಮಿಕ ಕೇಂದ್ರಗಳ ಬಳಿಯ ಮಾದಕ ವಸ್ತು ಮಾರಾಟ ನಿಷೇಧದ ವರದಿಯನ್ನು ಓದಿ ತನ್ನೂರಿನ ಸಮಸ್ಯೆಯ ಬಗ್ಗೆಯೂ ಪತ್ರ ಬರೆದು ಪತ್ರಿಕೆಯೊಂದರ ಸಂಪಾದಕೀಯ ವಿಭಾಗಕ್ಕೆ ಕಳುಹಿಸುವ ಮೂಲಕ ಗಮನ ಸೆಳೆದಿದ್ದಳು.
ಈಕೆ ಬರೆದ ಪತ್ರವನ್ನು ಪತ್ರಿಕೆಯ ಸಂಪಾದಕೀಯ ವಿಭಾಗವು ಮುಖ್ಯಮಂತ್ರಿಗಳ ಸಚಿವಾಲಯದ ಕುಂದುಕೊರತೆ ವಿಭಾಗದ ಅಧಿಕಾರಿ ವೈಷ್ಣವಿ ಅವರಿಗೆ ರವಾನಿಸಿತ್ತು. ಪತ್ರ ತಲುಪಿದ ಎರಡು ಗಂಟೆಗಳಲ್ಲಿ ಸೂಕ್ತ ಸ್ಪಂದನೆ ದೊರೆತಿದ್ದು, ಸಂಜೆ ಹೊತ್ತಿಗೆ ಕಡಬ ಪೊಲೀಸರು ಅಂಗಡಿಗೆ ದಾಳಿ ನಡೆಸಿದ್ದರು.
ದಾಳಿಯ ವೇಳೆ ಅಂಗಡಿಯಲ್ಲಿ ಗುಟ್ಕಾ, ಸಿಗರೇಟ್ ಗಳು ಪತ್ತೆಯಾಗಿದ್ದು,ವಶಕ್ಕೆ ಪಡೆದ ಬಳಿಕ ತಂಬಾಕು ನಿಷೇಧ ಕಾಯಿದೆಯಡಿ ಅಂಗಡಿ ಮಾಲೀಕರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ. ಸದ್ಯ ಬಾಲಕಿ ಬರೆದ ಪತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪುಟ್ಟ ಬಾಲಕಿಯ ಸಾಮಾಜಿಕ ಕಳಕಳಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.