ಕಾರವಾರ: ಆರ್ಕೆಸ್ಟ್ರಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ, ವಿವಾಹಿತ ಮಹಿಳೆಯನ್ನು ಬ್ಲ್ಯಾಕ್ ಮೇಲ್ ಮಾಡಿ, ಅತ್ಯಾಚಾರ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಮಾಜಿ ಸದಸ್ಯ, ದೇವಾಲಯ ಹಿತರಕ್ಷಣಾ ವೇದಿಕೆಯ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಎಂಬಾತನನ್ನು ಕಾರವಾರ ಪೋಲಿಸರು ಬಂಧಿಸಿದ್ದಾರೆ.
ವಿವಾಹಿತ ಮಹಿಳೆಯ ಜೊತೆ ಸಲುಗೆ ಬೆಳೆಸಿ, ಆಕೆಗೆ ಆರ್ಕೆಸ್ಟ್ರಾದಲ್ಲಿ ಹಾಡುವ ಅವಕಾಶ ನೀಡುವುದಾಗಿ ನಂಬಿಸಿ, ಅತ್ಯಾಚಾರ ಮಾಡಿದ್ದ. ಮಾತ್ರವಲ್ಲ, ವಿವಾಹಿತ ಮಹಿಳೆಯರ ನಗ್ನ ಚಿತ್ರ ಸೆರೆಹಿಡಿದು ಹಲವರಿಗೆ ಶೇರ್ ಮಾಡಿದ್ದು, ಲಕ್ಷಾಂತರ ರೂಪಾಯಿ ಹಣ ಬ್ಲ್ಯಾಕ್ ಮೇಲ್ ಮಾಡಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪ್ರಕರಣದ ವಿವರ :
ದೂರುದಾರ ವಿವಾಹಿತ ಮಹಿಳೆಯು ಸಂಗೀತದಲ್ಲಿ ಆಸಕ್ತಿ ಉಳ್ಳವರಾಗಿದ್ದು, ಮೊಬೈಲ್ ನಲ್ಲಿರುವ ಕ್ಲಬ್ ಹೌಸ್ ಅಪ್ಲಿಕೇಷನ್ ನಲ್ಲಿ ಆಗಾಗ ಹಾಡು ಹಾಡುತ್ತಿದ್ದರು. ಕಳೆದ 2020ರಲ್ಲಿ ಕ್ಲಬ್ ಹೌಸ್ ಅಪ್ಲಿಕೇಶನ್ ಮೂಲಕ ಈಕೆಗೆ ಆರೋಪಿ ಪ್ರಶಾಂತ ಭಟ್ ಮಾಣಿಲ ಪರಿಚಯವಾಗಿದ್ದು, ಇಬ್ಬರೂ ಚಾಟ್ ಮಾಡುತ್ತಾ ಇದ್ದರು. ನಂತರ ಫೇಸ್ ಬುಕ್ ನಲ್ಲಿ ಇಬ್ಬರೂ ಫ್ರೆಂಡ್ ಆಗಿದ್ದರು. ಮಾತ್ರವಲ್ಲ ಇಬ್ಬರೂ ಪರಸ್ಪರ ಹತ್ತಿರವಾಗಿದ್ದರು ಎನ್ನಲಾಗಿದೆ.
ನಂತರದ ದಿನಗಳಲ್ಲಿ ಆರೋಪಿ ದೂರುದಾರರಿಗೆ ಆರ್ಕೆಸ್ಟ್ರಾದಲ್ಲಿ ಹಾಡಲು ಅವಕಾಶ ಕೊಡಿಸುವುದಾಗಿ ಆಸೆ ಹುಟ್ಟಿಸಿದ್ದ ಎನ್ನಲಾಗಿದೆ. ಆರೋಪಿಯು ದೂರುದಾರರಿಗೆ ನಿನ್ನನ್ನು ಭೇಟಿಯಾಗಬೇಕು ಎಂದು ಅನಿಸುತ್ತಿದೆ ಎಂದು ಮನವೊಲಿಸಿ, ಕಳೆದ 2023 ಜನವರಿ ಕೊನೆ ವಾರದಲ್ಲಿ ಶಿರಸಿ ಮಾರಿಗುಡಿ ದೇವಸ್ಥಾನದಲ್ಲಿ ಭೇಟಿಯಾಗಿ, ಅಲ್ಲಿಂದ ಶಿರಸಿಯ ಖಾಸಗಿ ಲಾಡ್ಜ್ ಗೆ ದೂರುದಾರಳನ್ನು ಕರೆದುಕೊಂಡು ಹೋಗಿದ್ದ. ಅಲ್ಲಿ ರೂಮ್ ಮಾಡಿ ದೂರುದಾರಳ ಮೇಲೆ ಬಲಾತ್ಕಾರ ಎಸಗಿದ್ದ ಎನ್ನಲಾಗಿದೆ.
2023ರ ಫೆಬ್ರುವರಿ ಮೊದಲನೇ ವಾರದಲ್ಲಿ ಮತ್ತೆ ಅದೇ ಖಾಸಗಿ ಲಾಡ್ಜ್‌ಗೆ ಆರೋಪಿಯು ದೂರುದಾರಳನ್ನು ಕರೆದುಕೊಂಡು ಹೋಗಿ, ಮತ್ತೆ ಬಲಾತ್ಕಾರ ಮಾಡಿದ್ದ. ಈ ಎರಡೂ ಘಟನೆಯ ವೇಳೆ ಆರೋಪಿ ದೂರುದಾರಳೊಂದಿಗೆ ತನ್ನ ಫೋಟೋಗಳನ್ನು ತೆಗೆದುಕೊಂಡಿದ್ದ ಎಂದು ದೂರಲಾಗಿದೆ.
ವಿವಾಹಿತ ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಂಡ ಬಳಿಕ ಆರೋಪಿಯು ಪ್ರತಿ ದಿನ ವಾಟ್ಸಪ್‌ನಲ್ಲಿ ಮೆಸೆಜ್ ಮಾಡಿ, ಖಾಸಗಿ ವೀಡಿಯೋ ಹಾಗೂ ಫೋಟೋಗಳನ್ನು ನಿನ್ನ ತಾಯಿ ಹಾಗೂ ನಿನ್ನ ಗಂಡನಿಗೆ ಕಳುಹಿಸುತ್ತೇನೆ ಎಂದು ಬ್ಲಾಕ್ ಮೇಲ್ ಮಾಡುತ್ತಿದ್ದ. ಮಾತ್ರವಲ್ಲ, ತನಗೆ ಹಣದ ಸಮಸ್ಯೆ ಇದೆ. ಆದ್ದರಿಂದ ಹಣ ನೀಡುವಂತೆ ಪೀಡಿಸುತ್ತಿದ್ದ. ನೀಡದೇ ಇದ್ದರೆ ಫೊಟೋ, ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವುದಾಗಿ ಬೆದರಿಸಿದ್ದ. ಹೆದರಿದ ಮಹಿಳೆಯು ತನ್ನ ಗಂಡನ ಮೂಲಕ ರೂ. 25,000ವನ್ನು ಆರೋಪಿಯ ಮೊಬೈಲ್ ನಂಬರಿಗೆ ಗೂಗಲ್ ಪೇ ಮಾಡಿಸಿರುತ್ತಾರೆ. ಇದಾದ ನಂತರ 7 ಲಕ್ಷ ರೂ. ನೀಡುವಂತೆ ಬೆದರಿಕೆ ಹಾಕುತ್ತಿದ್ದ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ, ಹಣ ನೀಡದೇ ಇದ್ದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಪ್ರಕರಣದ ಬಗ್ಗೆ ಮನೆಯವರ ಜೊತೆ ಚರ್ಚಿಸಿದ ದೂರುದಾರ ಮಹಿಳೆಯು, ವಿಳಂಬವಾಗಿ ಪೊಲೀಸ್ ದೂರು ನೀಡಿದ್ದರು. ಆರೋಪಿ ಪ್ರಶಾಂತ ಭಟ್ ಮಾಣಿಲ ವಿರುದ್ಧ ಕಾರವಾರ ಮಹಿಳಾ ಪೋಲಿಸ್ ಠಾಣೆಯಲ್ಲಿ ಐಪಿಸಿ 376, 376(N), 504, 506, 503, 384 ಮತ್ತು IT Act 2008ರ 67(A) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.