ಪುತ್ತೂರು: ಪುತ್ತೂರು ತಾಲೂಕಿನಾದ್ಯಂತ ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಗುರುವಾರ ಮುಸ್ಲಿಂ ಬಾಂಧವರು ಆಚರಿಸಿದರು.
ಬೆಳಿಗ್ಗೆ ಮುಸ್ಲಿಂ ಬಾಂಧವರು ಪ್ರಾರ್ಥನಾ ಮಂದಿರಗಳಿಗೆ ತೆರಳಿ ಪರಸ್ಪರ ಶುಭಾಶಯ ಕೋರಿದರು.
ಈದ್ ಮಿಲಾದ್ ಅಂಗವಾಗಿ ತಾ ದ.ಕ. ಜಿಲ್ಲಾ ಯುವಜನ ಪರಿಷತ್ ಪುತ್ತೂರು ತಾಲೂಕು ಹಾಗೂ ಈದ್ ಮಿಲಾದ್ ಸಮಿತಿ ವತಿಯಿಂದ 31ನೇ ವರ್ಷದ ಬೃಹತ್ ಮಿಲಾದ್ ಸಮಾವೇಶ ಹಾಗೂ ಬುರ್ಧಾ ಮಜ್ಲಿಸ್ ಗುರುವಾರ ನಗರದ ಕಿಲ್ಲೆ ಮೈದಾನದಲ್ಲಿ ಹಮ್ಮಿಕೊಂಡಿತು.
ಸಂಜೆ ಕಬಕ ವೃತ್ತದಲ್ಲಿ ರ್ಯಾಲಿಗೆ ಕಬಕ ಟೈಲರ್ ಇಸ್ಮಾಯಿಲ್ ಸಾಹೇಬ್ ಚಾಲನೆ ನೀಡಿದರು. ಈಸ್ಟರ್ನ್ ಗ್ರೂಪ್ ಮಾಲಕ ಜ.ಕಲಂದರ್ ಧ್ವಜ ಸ್ವೀಕಾರ ಮಾಡಿದರು. ಬಳಿಕ ಹೊರಟ ಬೃಹತ್ ವಾಹನ ಜಾಥಾ ಮುಖ್ಯರಸ್ತೆಯಾಗಿ ಬೊಳುವಾರು, ದರ್ಬೆಯಿಂದಾಗಿ ಸಂಜೆ ಕಿಲ್ಲೆ ಮೈದಾನಕ್ಕೆ ತೆರಳಿ ಸಮಾಪನ ಗೊಂಡಿತು.
ಸಂಜೆ ಕಿಲ್ಲೆ ಮೈದಾನದಲ್ಲಿ ನಡೆದ ಸಮಾವೇಶವನ್ನು ಬಹು ಎಂ.ಎಂ. ಮಹ್ ರೂಫ್ ಸುಲ್ತಾನಿ ಅಲ್ಪುರ್ಖಾನಿ ಆತೂರು ಉದ್ಘಾಟಿದರು. ಕೇಂದ್ರ ಜುಮ್ಮಾ ಮಸೀದಿ ಮುದರ್ರಿಸ್ ಬಹು.ಅಸ್ಸಯ್ಯದ್ ಅಹ್ಮದ್ ಪೊಕೋಯ ತಂಙಳ್ ದುವಾಶೀರ್ವಚನ ನೀಡಿದರು. ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್.ಟಿ.ಅಬ್ದುಲ್ ರಝಾಕ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಬಹು.ಆಶಿಕ್ ದಾರಿಮಿ ಅಲಂಪುಝ ಪ್ರಭಾಷಣ ಮಾಡಿದರು. ರಾತ್ರಿ ಬಹು. ಫಕ್ರೆ ಆಲಂ ಮುಂಬೈಯವರಿಂದ ನಾತೇ ಶರೀಫ್ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ರಾತ್ರಿ ಅನ್ನದಾನ ನಡೆಯಿತು. ನೂರಾರು ಮಂದಿ ಮುಸ್ಲಿಂ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಸಮಾರಂಭದಲ್ಲಿ ತಾಲೂಕು ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ, ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್ ಅಧ್ಯಕ್ಷ ಕೆ.ಪಿ.ಮಹಮ್ಮದ್ ಹಾಜಿ, ಉದ್ಯಮಿ ರಿಯಾಝ್, ಈದ್ ಮಿಲಾದ್ ಸಮಿತಿ ಅಧ್ಯಕ್ಷ ಬಶೀರ್ ಪರ್ಲಡ್ಕ, ಪ್ರಧಾನ ಕಾರ್ಯದರ್ಶಿ ಇಫಾಝ್ ಬನ್ನೂರು, ಮುಸ್ಲಿಂ ಯುವಜನ ಪರಿಷತ್ ಕೋಶಾಧಿಕಾರಿ, ನ್ಯಾಯವಾದಿ ಶಾಕಿರ್ ಹಾಜಿ, ನೌಷದ್ ಹಾಜಿ ಬೊಳ್ವಾರ್, ಹಸೈನಾರ್ ಬನಾರಿ, ಅಶ್ರಫ್ ಬಾವ, ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.