ಪುತ್ತೂರು: ನಗರಸಭೆಯ 31 ವಾರ್ಡ್ ಸಂಖ್ಯೆ ಬಲ್ನಾಡು ಗ್ರಾಮದ ಉಜ್ರುಪಾದೆ ಎಂಬಲ್ಲಿ ಹೈಮಾಸ್ಟ್ ದೀಪ ಅಳವಡಿಸುವಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಪರ ವಿರೋಧಗಳು ಮುಂದುವರಿದಿದ್ದು, ಇದೀಗ ನಗರಸಭೆ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು ಹೈಮಾಸ್ಟ್ ದೀಪವನ್ನು ಅಗತ್ಯತೆ ಇರುವಲ್ಲಿ ಅಳವಡಿಸುವಂತೆ ನಗರಸಭೆಗೆ ಮನವಿ ಮಾಡಿದ್ದಾರೆ.
ಪ್ರಸ್ತುತ ಉಜ್ರುಪಾದೆ ಜಂಕ್ಷನ್‌ನಲ್ಲಿ ಹೈ ಮಾಸ್ಟ್ ದೀಪ ಅಳವಡಿಸುವ ಕೆಲಸ ನಡೆಯುತ್ತಿದೆ. ಆದರೆ ಅಗತ್ಯತೆ ಇರುವಲ್ಲಿ ಅಳವಡಿಸದೇ ಇರುವುದರಿಂದ ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ ಆಗಿದೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ, ನಗರಸಭೆ ಮಾಜಿ ಸದಸ್ಯ ಹೆಚ್.ಮಹಮ್ಮದ್ ಆಲಿ ನಗರಸಭೆಗೆ ದೂರು ನೀಡಿದ್ದರು. ಈ ಕುರಿತು ನಗರಸಭೆ ಆ ಭಾಗದ ಸದಸ್ಯೆ ಪೂರ್ಣಿಮಾ ಕೋಡಿಯಡ್ಕ ಆಕ್ಷೇಪ ವ್ಯಕ್ತಪಡಿಸಿ, ನಾವು ಸಾರ್ವಜನಿಕರ ಮನವಿ ಮೇರೆಗೆ ಅಲ್ಲಿ ಹೈಮಾಸ್ಟ್ ಅಳವಡಿಸುತ್ತಿರುವುದು ಎಂದು ತಿಳಿಸಿದ್ದರು.
ಇದೀಗ ನಗರಸಭೆ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು ಪುರಸಭೆಯ ಮಾಜಿ ಚಾಲಕರೊಬ್ಬರ ಒತ್ತಾಸೆಗೆ ಅಲ್ಲಿ ದೀಪ ಅಳವಡಿಸಲಾಗುತ್ತಿದೆ ಹೊರತು ಸಾರ್ವಜನಿಕ ಹಿತಾಸಕ್ತಿ ಇರುವುದಿಲ್ಲ. ಸಾರ್ವಜನಿಕರಿಗೆ ಉಪಯೋಗ ಆಗುವ ಹಲವಾರು ಸ್ಥಳಗಳಿವೆ. ಹೈ ಮಾಸ್ಟ್ ದೀಪವನ್ನು ಯಾರಿಗೂ ಪ್ರಯೋಜನವಿಲ್ಲದ, ವಾಹನ ಸಂಚಾರಕ್ಕೆ ತೊಂದರೆ ಆಗುವ ರೀತಿಯಲ್ಲಿ ಅಳವಡಿಸುವ ಬದಲು ಸಾರ್ವಜನಿಕರಿಗೆ ಪ್ರಯೋಜನವಾಗುವ ಸ್ಥಳದಲ್ಲಿ ಅಳವಡಿಸುವಂತೆ ಅವರು ಮನವಿಯಲ್ಲಿ ತಿಳಿಸಿದ್ದಾರೆ.