ಪ್ರಸಿದ್ಧ ವರ್ಣಚಿತ್ರ ಕಲಾವಿದ ಕೆ. ಚಂದ್ರನಾಥ ಆಚಾರ್ಯ ಅವರಿಗೆ ಈ ಬಾರಿಯ ಡಾ. ಶಿವರಾಮ ಕಾರಂತ ಬಾಲವನ ಪ್ರಶಸ್ತಿ | ಮುಖ್ಯಮಂತ್ರಿಯಿಂದಲೂ ಪ್ರಶಸ್ತಿ ಪಡೆದಿದ್ದ ಮೂಲತಃ ಪುತ್ತೂರಿನ ಕಲಾವಿದ

ಪುತ್ತೂರು: ಇಲ್ಲಿನ ಪರ್ಲಡ್ಲದಲ್ಲಿರುವ ಡಾ. ಶಿವರಾಮ ಕಾರಂತ ಬಾಲವನದಲ್ಲಿ ಅ. 10ರಂದು ನಡೆಯಲಿರುವ ಡಾ. ಶಿವರಾಮ ಕಾರಂತರ ಜನ್ಮದಿನೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಅಂಗವಾಗಿ ಈ ಬಾರಿ ಬೆಂಗಳೂರಿನ ಪ್ರಸಿದ್ಧ ವರ್ಣ ಚಿತ್ರಕಲಾವಿದ ಕೆ. ಚಂದ್ರನಾಥ ಆಚಾರ್ಯ ಅವರನ್ನು ಡಾ.ಶಿವರಾಮ ಕಾರಂತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕರ್ನಾಟಕ ಸರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಡಾ. ಕೋಟ ಶಿವರಾಮ ಕಾರಂತರ ಬಾಲವನ ಸಮಿತಿ ಮತ್ತು ಪುತ್ತೂರು ಸಹಾಯಕ ಆಯುಕ್ತರ ಕಾರ್ಯಾಲಯ, ಪುತ್ತೂರು ಉಪವಿಭಾಗ ಮತ್ತೂರು ಇದರ ವತಿಯಿಂದ ದಿವಂಗತ ಕುರುಂಜಿ ವೆಂಕಟರಮಣ ಗೌಡ ಇವರ ಶಾಶ್ವತ ಕೊಡುಗೆಯಲ್ಲಿ ಕೊಡ ಮಾಡುವ ಕೋಟಾ ಶಿವರಾಮ ಕಾರಂತರ ಬಾಲವನ ಪ್ರಶಸ್ತಿ ಇದಾಗಿದೆ. ಪ್ರಶಸ್ತಿ 25 ಸಾವಿರ ರೂ.ಗಳ ನಗದು ಪುರಸ್ಕಾರ, ಕಾರಂತರ ಸ್ಮರಣಿಕೆ ಹಾಗೂ ಪ್ರಶಸ್ತಿಯನ್ನೊಳಗೊಂಡಿದೆ.
ಮೂಲತಃ ಪುತ್ತೂರಿನವರಾದ ಕೆ. ಚಂದ್ರನಾಥ ಆಚಾರ್ಯ ಫೆಬ್ರವರಿ 28, 1949ರಲ್ಲಿ ಜನಿಸಿದ್ದರು. ತಂದೆ ಮಹಾಲಿಂಗ ಆಚಾರ್ಯ, ತಾಯಿ ಸುಶೀಲಮ್ಮ. ಬಾಲ್ಯದಲ್ಲಿಯೇ ಕಲಾಸಕ್ತಿಯನ್ನು ಮೂಡಿಸಿಕೊಂಡಿದ್ದ ಅವರು, ತಮ್ಮ ಕಾಲೇಜು ಜೀವನದಲ್ಲಿಯೇ ಆಗಿನ ಪ್ರಸಿದ್ಧ ಪತ್ರಿಕೆ ಮಲ್ಲಿಗೆಯಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದರು. ಅನೇಕ ಪುಸ್ತಕಗಳ ಮುಖಚಿತ್ರ ಕಲಾವಿದರಾಗಿಯೂ ಕೆಲಸ ಮಾಡಿದ್ದಾರೆ. ಕಲಾವಿದ ಆರ್.ಎಂ. ಹಡಪದರ ಕೆನ್ ಸ್ಕೂಲ್ ಆಫ್ ಆರ್ಟ್ ಸೇರಿ ತಮ್ಮ ಬದುಕಿನ ಬಹಳ ಮುಖ್ಯ ಅಧ್ಯಾಯ ಆರಂಭಿಸಿದ್ದರು.

ಪ್ರಜಾವಾಣಿ ಬಳಗದ ಕಲಾವಿದರಾಗಿ ಸೇರಿ ಸುಧಾ, ಮಯೂರಗಳಲ್ಲಿ ನವ್ಯದ ಜೊತೆಗೆ ಜನಪ್ರಿಯ ಕಥೆ ಕಾದಂಬರಿಗಳಿಗೆ ಚಿತ್ರ ರಚಿಸಿದ್ದಾರೆ. ಶಾಂತಿನಿಕೇತನದಲ್ಲಿ ಗ್ರಾಫಿಕ್ಸ್ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಇವರು, ಮತ್ತೆ ಪತ್ರಿಕಾ ಕೆಲಸಕ್ಕೆ ಸೇರಿದರು. ಚಿತ್ರರಂಗದಲ್ಲಿ ಕೆಲಸ ಮಾಡಿರುವ ಇವರು ಲಂಕೇಶರ ಪಲ್ಲವಿ, ಎಲ್ಲಿಂದಲೋ ಬಂದವರು, ಅನುರೂಪ ಮತ್ತು ಗಿರೀಶ್ ಕಾರ್ನಾಡರ ಘಟಶ್ರಾದ್ಧ ಚಲನಚಿತ್ರಗಳಿಗೆ ಕಲಾ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಖ್ಯಾತ ಚಿತ್ರ ಕಲಾವಿದೆ, ಕೆಕೆ ಹೆಬ್ಬಾರರ ಗರಡಿಯಲ್ಲಿ ಪಳಗಿದ ಇವರು ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ವಿದ್ವಾಂಸ ವೇತನ ಪಡೆದು ಎರಡು ವರ್ಷ ಗ್ರಾಫಿಕ್ಸ್ನಲ್ಲಿ ಉನ್ನತ ಅಧ್ಯಯನವನ್ನು ಮಾಡಿದ್ದಾರೆ.
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕಕ್ಕೆ ಹೆಸರು ತಂದು ಕೊಟ್ಟಿರುವ ಅವರು ಇದುವರೆಗೂ ಏಳು ಬಾರಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಗಳನ್ನು ನಡೆಸಿಕೊಟ್ಟಿದ್ದಾರೆ.































 
 

ಈ ಹಿಂದೆ ಅವರ ಪ್ರತಿಭೆಯನ್ನು ಗುರುತಿಸಿ ಕರ್ನಾಟಕ, ಲಲಿತಕಲಾ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕರ್ನಾಟಕ ಸರಕಾರ ಕೊಡ ಮಾಡುವ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರು ಮೂಲತಃ ಪುತ್ತೂರಿನ ಪರ್ಲಡ್ಕದವರು.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರ ಅಧ್ಯಕ್ಷತೆಯಲ್ಲಿ ಐದು ಜನರ ಸಮಿತಿ ಆಯ್ಕೆ ಮಾಡಿದ್ದು ಅ. 10ರಂದು ಬಾಲವನದಲ್ಲಿ ನಡೆಯುವ ಕಾರಂತ ಜನ್ಮದಿನೋತ್ಸವದಂದು ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top