‘ಕೆನಡಾ ಖಲಿಸ್ತಾನಿ ಉಗ್ರರ ಸ್ವರ್ಗ’: ಮತ್ತೊಮ್ಮೆ ಬಯಲು ಮಾಡಿದ ಎನ್.ಐ.ಎ. | ಖಲಿಸ್ತಾನಿ- ಪಾಕ್ ನಂಟಿನ ಮಾಹಿತಿಯೂ ಬಹಿರಂಗ!!

ಹೊಸದಿಲ್ಲಿ: ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜಾರ್‌ ಹತ್ಯೆ ವಿಚಾರದಲ್ಲಿ ಭಾರತ ಮತ್ತು ಕೆನಡಾ ‘ರಾಜತಾಂತ್ರಿಕ ಸಮರ’ ಮುಂದುವರಿದಿರುವ ಹೊತ್ತಿನಲ್ಲಿಯೇ ‘ಕೆನಡಾ ಖಲಿಸ್ತಾನಿ ಉಗ್ರರ ಸ್ವರ್ಗ’ ಎಂಬ ವಾದ ಎನ್‌ಐಎ ತನಿಖೆಯಿಂದ ಇನ್ನಷ್ಟು ಬಲಗೊಂಡಿದೆ.

ಖಲಿಸ್ತಾನ್- ಗ್ಯಾಂಗ್‌ಸ್ಟರ್‌ಗಳ ನಂಟನ್ನು ಕತ್ತರಿಸಲು ಹೊರಟಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಪಂಜಾಬ್, ಹರ್ಯಾಣ, ದಿಲ್ಲಿ- ಎನ್‌ಸಿಆರ್, ರಾಜಸ್ಥಾನ, ಉತ್ತರಾಖಂಡ ಮತ್ತು ಉತ್ತರ ಪ್ರದೇಶಗಳ 50ಕ್ಕೂ ಹೆಚ್ಚು ಸ್ಥಳಗಳ ಮೇಲೆ ಬುಧವಾರ ದಾಳಿ ನಡೆಸಿದೆ. ಖಲಿಸ್ತಾನಿ- ಪಾಕಿಸ್ತಾನದ ಐಎಸ್‌ಐ ಮತ್ತು ಗ್ಯಾಂಗ್‌ಸ್ಟರ್‌ಗಳ ನಡುವಿನ ಸಂಬಂಧದ ಕುರಿತು ಎನ್‌ಐಎ ಸಾಕಷ್ಟು ಮಾಹಿತಿ ಕಲೆಹಾಕಿದೆ ಎನ್ನಲಾಗಿದೆ.

ಪಂಜಾಬ್‌ನ 30 ಸ್ಥಳಗಳು, ರಾಜಸ್ಥಾನದ 13, ಹರ್ಯಾಣದ 4, ಉತ್ತರಾಖಂಡದ 2 ಮತ್ತು ದಿಲ್ಲಿ ಹಾಗೂ ಉತ್ತರ ಪ್ರದೇಶದ ಬೇರೆ ಬೇರೆ ಸ್ಥಳಗಳಲ್ಲಿ ದಾಳಿಗಳು ನಡೆಯುತ್ತಿವೆ. ಯುಎಪಿಎ ಅಡಿ ಬಂಧಿತರಾದ ಗ್ಯಾಂಗ್‌ಸ್ಟರ್‌ಗಳು ಮತ್ತು ಖಲಿಸ್ತಾನಿಗಳಿಂದ ಪಡೆದ ಮಾಹಿತಿಗಳು, ಭಯೋತ್ಪಾದನೆಗೆ ಹಣಕಾಸು ಪೂರೈಕೆ, ಶಸ್ತ್ರಾಸ್ತ್ರ ಸರಬರಾಜು ಮತ್ತು ವಿದೇಶಿ ನೆಲದಿಂದ ದೇಶ ವಿರೋಧಿ ಕೃತ್ಯಗಳನ್ನು ನಡೆಸುವ ಸಂಪರ್ಕ ಜಾಲವನ್ನು ಬಹಿರಂಗಪಡಿಸಿವೆ.

ಕೆಲಸ ಹುಡುಕಿಕೊಂಡು ಕೆನಡಾಗೆ ಹೋಗುವ ಭಾರತದ ಸಿಖ್‌ ಯುವಕರ ಮೈಂಡ್‌ವಾಶ್‌ ಮಾಡಿ ಭಾರತ ವಿರೋಧಿ ಕೃತ್ಯಗಳನ್ನು ಕೈಗೊಳ್ಳುವಂತೆ ‘ಸಿಖ್‌ ಫಾರ್‌ ಜಸ್ಟೀಸ್‌’ (ಎಸ್‌ಎಫ್‌ಜೆ) ಸೇರಿದಂತೆ ಕೆಲವು ಖಲಿಸ್ತಾನಿ ಸಂಘಟನೆಗಳು ತರಬೇತಿ ನೀಡುತ್ತಿವೆ ಎಂದು ಎನ್‌ಐಎ ಮೂಲಗಳು ಹೇಳಿವೆ.

ಭಾರತ ವಿರೋಧಿ ಕೃತ್ಯಗಳನ್ನು ಕೈಗೊಳ್ಳಲು ಸಿಖ್‌ ಸಮುದಾಯದ ಜನರನ್ನು ಖಲಿಸ್ತಾನಿ ಉಗ್ರ ಸಂಘಟನೆಗಳು ಗುರಾಣಿಯನ್ನಾಗಿ ಬಳಸಿಕೊಳ್ಳುತ್ತಿವೆ ಎಂಬ ಮಾಹಿತಿ ಎನ್‌ಐಎ ತನಿಖೆ ವೇಳೆ ಬಯಲಿಗೆ ಬಂದಿದೆ. ಕೆನಡಾದಲ್ಲಿ ಹತ್ಯೆಗೀಡಾದ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಅಲ್ಲದೇ ಆತನ ಸಹಚರರಾದ ಮೊಹಿಂದರ್‌ ಸಿಂಗ್‌ ಬುವಲ್‌ ಮತ್ತು ಭಗತ್‌ ಸಿಂಗ್‌ ಬ್ರಾರ್‌ ನೇತೃತ್ವದ ತಂಡಗಳು ಇಂಥ ‘ಮೈಂಡ್‌ವಾಶ್‌’ನಲ್ಲಿ ತೊಡಗಿದ್ದವು ಎಂದೂ ತನಿಖಾ ಸಂಸ್ಥೆಗಳು ಹೇಳಿವೆ.

‘ಪ್ಲಂಬಿಂಗ್‌, ಟ್ರಕ್‌ ಡ್ರೈವರ್‌ ಸೇರಿದಂತೆ ಕೆಲವು ಮಧ್ಯಮ ಗಾತ್ರದ ಕೌಶಲ್ಯ ಬಯಸುವ ಕೆಲಸಗಳನ್ನು ಅರಸಿ ಬರುವ ಸಿಖ್‌ ಯುವಕರನ್ನು ಹಾಗೂ ಧಾರ್ಮಿಕ ಕಾರ್ಯಕರ್ತರನ್ನು ಕೆನಡಾದಲ್ಲಿರುವ ಖಲಿಸ್ತಾನಿಗಳ ಗ್ಯಾಂಗ್‌ ಅವರ ತಲೆ ಕೆಡಿಸಿ ಖಲಿಸ್ತಾನಿಗಳ ಪರ ಅನುಕಂಪ ಬರುವಂತೆ ಮಾಡುತ್ತಿವೆ. ಅಲ್ಲದೇ ಭಾರತ ವಿರೋಧಿ ಚಟುವಟಿಕೆ ಕೈಗೊಳ್ಳುವಂತೆ ತರಬೇತಿ ನೀಡುತ್ತಿವೆ. ಖಲಿಸ್ತಾನಿ ಹ್ಯಾಂಡ್ಲರ್‌ಗಳು ಪ್ರಾಯೋಜಿತ ವೀಸಾಗಳ ವ್ಯವಸ್ಥೆಯನ್ನು ಮಾಡುತ್ತಿದ್ದರು. ಜತೆಗೆ ಕೆನಡಾದಲ್ಲಿ ಉನ್ನತ ಶಿಕ್ಷಣ ಪೂರೈಸಿ ಅಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಸಾಧ್ಯವಾಗದ ಸಿಖ್‌ ಯುವಕರನ್ನು ಗುರುತಿಸಿ ಅವರನ್ನೂ ಖಲಿಸ್ತಾನಿ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದರು,” ಎಂದು ಮೂಲಗಳು ಹೇಳಿವೆ.































 
 

ಖಲಿಸ್ತಾನಿಗಳ ನಿಯಂತ್ರಣದಲ್ಲಿ

”ಬ್ರ್ಯಾಂಪ್ಟನ್‌ ಮತ್ತು ಎಡ್‌ಮಾಂಟನ್‌ ಸೇರಿದಂತೆ ಕೆನಡಾದ ಇತರ ಕಡೆಗಳಲ್ಲಿರುವ 30 ಗುರುದ್ವಾರಗಳು ಖಲಿಸ್ತಾನಿಗಳ ನಿಯಂತ್ರಣದಲ್ಲಿವೆ. ಅಲ್ಲದೇ ಈ ಖಲಿಸ್ತಾನಿ ಗ್ಯಾಂಗ್‌ಗಳು ಕೆನಡಾದಲ್ಲಿ ರಾಜಕೀಯ ಆಶ್ರಯ ಬಯಸಿ ಬರುವ ಮೂಲಭೂತವಾದಿಗಳಿಗೆ ಸಕಲ ವ್ಯವಸ್ಥೆಯನ್ನೂ ಮಾಡುತ್ತಿದ್ದರು,” ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top