ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅರಿಯಡ್ಕ ವಲಯದ ಪಡುವನ್ನೂರು ಕಾರ್ಯಕ್ಷೇತ್ರದಲ್ಲಿ ಹೊಸ ಸಂಘದ ಉದ್ಘಾಟನಾ ಸಮಾರಂಭ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಯೋಜನೆಯ ದ.ಕ. ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, 1982ರಲ್ಲಿ ಯೋಜನೆಯು ಆರಂಭಗೊಂಡಿದ್ದು, ಆ ದಿನಗಳಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ 5-6 ಸಂಘ ಮಾತ್ರ ಕಾರ್ಯಾಚರಿಸುತ್ತಿತ್ತು. ಪ್ರಸ್ತುತ ರಾಜ್ಯಾದ್ಯಂತ ಐದೂವರೆ ಲಕ್ಷ ಸಂಘ ಹುಟ್ಟಿಕೊಂಡು ಸುಮಾರು 50 ಲಕ್ಷ ಜನ ಸಂಘದಲ್ಲಿ ಸಕ್ರಿಯರಾಗಿದ್ದಾರೆ. ಈ ಮೂಲಕ ಪೂಜ್ಯರು ಜನರ ಬದುಕನ್ನು ಹಸನಾಗುವಂತೆ ಮಾಡಿದ್ದಾರೆ ಎಂದ ಅವರು, ನಾಲ್ಕು ಗೋಡೆಗಳ ಮಧ್ಯೆ ಇದ್ದ ಮಹಿಳೆ ಇಂದು ಸಮಾಜದ ಜನರ ಜತೆ ಬೆರೆಯುವಂತಾಗಲು ಯೋಜನೆ ಕಾರಣ ಎಂದರು.
ಸರ್ವೋದಯ ಪ್ರೌಢಶಾಲಾ ಶಿಕ್ಷಕಿ ಪ್ರಶಾಂತಿ ಮಾತನಾಡಿ, ಸಂಘಟನೆ ಬೆಳೆದು ನಿಮ್ಮ ಬಾಳು ಹಸನಾಗಲಿ ಎಂದು ಹಾರೈಸಿದರು.
ಎಂ.ಜಿ. ಟೆಕ್ಸ್ ಟೈಲ್ಸ್ ಮಾಲಕ ಗಂಗಾಧರ ರೈ ಮಾತನಾಡಿ, ಧಾರ್ಮಿಕ, ಸಾಮಾಜಿಕ ಕ್ಷೇತ್ರ, ಗ್ರಾಮ ಇವುಗಳ ಅಭಿವೃದ್ಧಿಯಲ್ಲಿ ಯೋಜನೆಯ ಪಾತ್ರ ಬಹಳಷ್ಟಿದೆ. ಯೋಜನೆಯಲ್ಲಿ ಜಾತಿ ಭೇದ ಭಾವವಿಲ್ಲದೆ ಎಲ್ಲರನ್ನೂ ಸಮಾನ ದೃಷ್ಟಿಯಿಂದ ಕಾಣುವುದು ಸಂತೋಷದ ವಿಷಯ ಎಂದರು.
ಭಜನಾ ಪರಿಷತ್ ಅಧ್ಯಕ್ಷ ಸುಬ್ಬಯ್ಯ ರೈ ಹಲಸಿನಡಿ ಮಾತನಾಡಿ, ಸಂಘ ಪರಸ್ಪರ ಅಭಿವೃದ್ಧಿ ಕುರಿತು ಚರ್ಚೆ ಮಾಡಲು ಅವಕಾಶ ನೀಡಿದೆ. ಯೋಜನೆ ಹಾಕಿದ ಕಾರ್ಯಕ್ರಮಗಳಿಂದ ನಿಮ್ಮ ಬಾಳು ಬೆಳಕಾಗಲಿ ಎಂದರು.
ಗ್ರಾ.ಪಂ. ಸದಸ್ಯ ವೆಂಕಟೇಶ್ ಕನ್ನಡ್ಕ, ಮಾಜಿ ಅಧ್ಯಕ್ಷೆ ಶ್ರೀಮತಿ ಉಪಸ್ಥಿತರಿದ್ದರು. ಪಡುವನ್ನೂರು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಪುಷ್ಪಲತಾ ಸ್ವಾಗತಿಸಿದರು. ಜ್ಞಾನದೀಪ ಶಿಕ್ಷಕಿ ಜ್ಯೋತಿ ರೈ ವಂದಿಸಿದರು. ವಲಯ ಮೇಲ್ವಿಚಾರಕ ಹರೀಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.