ಬೆಂಗಳೂರು: ಐಎಎಸ್ ಆಧಿಕಾರಿ ರೋಹಿಣಿ ಸಿಂಧೂರಿ ಅವರು ದಾಖಲಿಸಿರುವ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಇದು ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಅವರಿಗೆ ಭಾರಿ ಹಿನ್ನಡೆಯಾಗಿ ಪರಿಣಮಿಸಿದೆ.
ರೂಪಾ ಮೌದ್ಗಿಲ್ ಅವರು ಫೇಸ್‌ಬುಕ್, ಪತ್ರಿಕೆ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಮಾನಹಾನಿ ಮಾಡಿದ್ದಾರೆ. ಹಾಗಾಗಿ, ಅವರಿಂದ ಒಂದು ಕೋಟಿ ರೂಪಾಯಿಗಳನ್ನು ಪರಿಹಾರವಾಗಿ ಕೊಡಿಸಬೇಕು. ಅವರ ವಿರುದ್ಧ ಸೂಕ್ತ ದಂಡನೀಯ ಕ್ರಮ ಕೈಗೊಳ್ಳಬೇಕು ಎಂದು ಕೋರಿ ರೋಹಿಣಿ ಸಿಂಧೂರಿ ನಗರದ 24ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಕೋರ್ಟ್‌ನಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಇದನ್ನು ಪ್ರಶ್ನಿಸಿ ರೂಪಾ ಮೌದ್ಗಿಲ್ ಅವರು ಕೋರ್ಟ್ ಮೊರೆ ಹೊಕ್ಕಿದ್ದರು. ನಡುವೆ ಕೆಲವು ವಿಚಾರಣೆಗಳು ನಡೆದು ರೋಹಿಣಿ ಅವರ ವಿರುದ್ಧ ಮಾತನಾಡದಂತೆ, ಯಾವುದೇ ಪೋಸ್ಟ್ ಮಾಡದಂತೆ ಆದೇಶ ನೀಡಲಾಗಿತ್ತು. ರೂಪಾ ಅವರು ಅದನ್ನು ಪ್ರಶ್ನಿಸಿದಾಗ ತಡೆಯಾಜ್ಞೆ ತೆರವಾಗಿತ್ತು. ಇದೀಗ ಮಾನನಷ್ಟ ಮೊಕದ್ದಮೆಯನ್ನೇ ರದ್ದುಪಡಿಸಬೇಕೆಂಬ ಅರ್ಜಿಯ ವಿಚಾರಣೆ ನಡೆದು ಮನವಿಯನ್ನು ರದ್ದು ಮಾಡಿದೆ. ಈ ವಿಚಾರಣೆಯ ತೀರ್ಪನ್ನು ನೀಡಿರುವ ಹೈಕೋರ್ಟ್ ಯಾವ ಕಾರಣಕ್ಕಾಗಿ ಮಾನನಷ್ಟ ಮೊಕದ್ದಮೆ ರದ್ದು ಮಾಡಲು ಸಾಧ್ಯವಿಲ್ಲ ಎಂಬ ವಿವರಣೆ ನೀಡಿದೆ.
ತಮ್ಮ ಫೇಸ್ ಬುಕ್ ಖಾಸಗಿ ಖಾತೆಯಲ್ಲಿ ಪೋಸ್ಟ್ ಮಾಡಿದ ಹೇಳಿಕೆಗಳು ಮತ್ತು ಮಾಧ್ಯಮದ ಮುಂದೆ ನೀಡಿದ ಹೇಳಿಕೆಗಳನ್ನು ಪರಿಶೀಲಿಸಿದರೆ, ಅರ್ಜಿದಾರರಾದ ರೂಪಾ ಅವರು ಕ್ರಿಮಿನಲ್ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಹೇಳಿದ್ದಾರೆ.
ಫೇಸ್‌ಬುಕ್ ಖಾತೆಯಲ್ಲಿ ಮಾಡಿದ ಪೋಸ್ಟ್‌ಗಳು ಮತ್ತು ಮುದ್ರಣ ಮಾಧ್ಯಮದ ಮುಂದೆ ನೀಡಿದ ಹೇಳಿಕೆಗಳು ಆರೋಪದ ಅಡಿಯಲ್ಲಿ ಬರುತ್ತವೆಯೇ ಎಂಬ ಪ್ರಶ್ನೆಯು ವಿಚಾರಣೆಯ ವಿಷಯವಾಗಿದೆ ಎಂದು ಕೋರ್ಟ್ ಹೇಳಿದೆ.
ಏನಿದು ಐಎಎಸ್ – ಐಪಿಎಸ್ ಜಗಳ?
ಐಪಿಎಸ್ ಅಧಿಕಾರಿಯಾಗಿರುವ ರೂಪಾ ಅವರು 2023ರ ಫೆಬ್ರವರಿ 18 ಮತ್ತು 19ರಂದು ತಮ್ಮ ಫೇಸ್‌ಬುಕ್ ಅಕೌಂಟ್‌ನಲ್ಲಿ ರೋಹಿಣಿ ಸಿಂಧೂರಿ ಅವರ ಬಗ್ಗೆ ಸಾಲು ಸಾಲು ಆರೋಪಗಳನ್ನು ಮಾಡಿದ್ದರು. ರೋಹಿಣಿ ಸಿಂಧೂರಿ ಅವರು ಮನೆ ಹಾಳು ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಯಾಗಿದ್ದ ಡಿ.ಕೆ. ರವಿ ಅವರ ಸಾವನ್ನೂ ತಳುಕು ಹಾಕಿ, ಪೋಸ್ಟ್ ಮಾಡಿದ್ದ ರೂಪಾ ಅವರು, ಇತರ ಐಎಎಸ್ ಅಧಿಕಾರಿಗಳಿಗೆ ಅಸಭ್ಯ ಚಿತ್ರಗಳನ್ನು ರಾತ್ತಿ ಹೊತ್ತು ಕಳುಹಿಸುತ್ತಿದ್ದಾರೆ. ಬೇರೆ ಐಎಎಸ್ ಅಧಿಕಾರಿಗಳ ಮನೆ ಒಡೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದು ಭಾರಿ ಸಂಚಲನವನ್ನು ಸೃಷ್ಟಿಸಿತ್ತು.
ಇದರ ವಿರುದ್ಧ ರೋಹಿಣಿ ಸಿಂಧೂರಿ ಅವರು ಕೋರ್ಟ್ ಮೆಟ್ಟಿಲು ಹತ್ತಿದ್ದರು. ಈ ನಡುವೆ, ರಾಜ್ಯ ಸರ್ಕಾರ ಇಬ್ಬರೂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಲ್ಲದೆ, ಅವರನ್ನು ಸೇವೆಯಿಂದ ಮುಕ್ತಿಗೊಳಿಸಿ ರಜೆ ಮೇಲೆ ಕಳುಹಿಸಿತ್ತು. ಈಗ ಇಬ್ಬರೂ ಅಧಿಕಾರಿಗಳಿಗೆ ಮರಳಿ ಹುದ್ದೆಯನ್ನು ತೋರಿಸಲಾಗಿದೆ. ಅದರ ನಡುವೆ ಕೋರ್ಟ್‌ನಲ್ಲಿ ವಿಚಾರಣೆ ಮುಂದುವರಿದಿದೆ.