ಅಚ್ಚೇದಿನ್ ಬರುವುದಾಗಿ ಹೇಳಿದ್ದ ಬಿಜೆಪಿ, ಜನರ ಖಾತೆಗೆ ನಯಾ ಪೈಸೆ ಹಣ ಹಾಕಿಲ್ಲವೆಂದ ಅಶೋಕ್ ರೈ | ಕೊಳ್ತಿಗೆ ವಲಯ ಕಾಂಗ್ರೆಸ್‌ಕಾರ್ಯಕರ್ತರ ಸಭೆಯಲ್ಲಿ ಶಾಸಕರಿಗೆ ಸನ್ಮಾನ | ಕಾವು ಹೇಮನಾಥ ಶೆಟ್ಟಿ ಅವರಿಗೆ ಅರಣ್ಯ ನಿಗಮ ನೀಡಲು ಆಗ್ರಹ

ಪುತ್ತೂರು: ನಾವು ಅಧಿಕಾರಕ್ಕೆ ಬಂದರೆ ದೇಶದಲ್ಲಿ ಅಚ್ಚೇದಿನ್ ಕೊಡುತ್ತೇವೆ, ಜನರಿಗೆ ನೆಮ್ಮದಿಯ ಜೀವನ ಕೊಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಬಿಜೆಪಿ ಜನರ ಖಾತೆಗೆ ನಯಾ ಪೈಸೆ ನೀಡಿಲ್ಲ. ನೆಮ್ಮದಿಯ ಜೀವನವನ್ನೂ ನೀಡಿಲ್ಲ ಎಂದು ಶಾಸಕ ಅಶೋಕ್ ರೈ ಆರೋಪಿಸಿದರು.

ಕೊಳ್ತಿಗೆ ವಲಯ ಕಾಂಗ್ರೆಸ್ ವತಿಯಿಂದ ಕೊಳ್ತಿಗೆ ಅಂಬೇಡ್ಕರ್ ಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

ಚುನಾವಣೆ ಸಂದರ್ಭದಲ್ಲಿ ರಾಜ್ಯದ ಜನತೆಗೆ ಕೊಟ್ಟಿದ್ದ ಗ್ಯಾರಂಟಿಯನ್ನು ಕಾಂಗ್ರೆಸ್ ಈಡೇರಿಸಿದೆ. ಜನರ ಖಾತೆಗೆ ಹಣವನ್ನು ನೀಡಿದ್ದೇವೆ, ಅಕ್ಕಿಯನ್ನು ನೀಡಿದ್ದೇವೆ, ಉಚಿತ ಕರೆಂಟ್, ಮತ್ತು ಗೃಹಲಕ್ಷ್ಮಿ ಯೋಜನೆಯ 2 ಸಾವಿರ ಹಣ ಮತ್ತು ಉಚಿತ ಬಸ್ ಪ್ರಯಾಣವನ್ನು ಮಾಡಿದ್ದೇವೆ ಇಂತಹ ಒಂದೇ ಒಂದು ಕಾರ್ಯಕ್ರಮ ಬಿಜೆಪಿ ನೀಡಿದೆಯಾ? ಎಂದು ಪ್ರಶ್ನಿಸಿದರು. ಬಡವರು ನೆಮ್ಮದಿಯ ಜೀವನ ನಡೆಸಬೇಕಾದರೆ ಕಾಂಗ್ರೆಸ್ ಅಧಿಕಾರದಲ್ಲಿರಬೇಕು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು. ಚುನಾವಣೆಯ ಸಂದರ್ಭ ಜನರಲ್ಲಿ ಕೋಮು ಭಾವನೆಯನ್ನು ಭಿತ್ತಿ ಧರ್ಮದ ಆಧಾರದಲ್ಲಿ ಮತ ಪಡೆದು ಅಧಿಕಾರಕ್ಕೇರುವ ಬಿಜೆಪಿ ಬಳಿಕ ಜನರನ್ನು ಮರೆಯುತ್ತಿದೆ ಎಂದು ಹೇಳಿದರು.



































 
 

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಜನ ನೆಮ್ಮದಿಯ ನಿಟ್ಟುಸಿರುವ ಬಿಟ್ಟಿದ್ದಾರೆ, ಗ್ಯಾರಂಟಿ ಯೋಜನೆಯನ್ನು ಟೀಕಿಸುತ್ತಲೇ ಬಿಜೆಪಿಗರು ಅದರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಎಲ್ಲರನ್ನೂ ಸಮಾನ ರೀತಿಯಲ್ಲಿ ಕಾಣುತ್ತದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಸಾಕಷ್ಟು ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರಿಕೊಳ್ಳಲಿದ್ದಾರೆ ಎಂದು ಶಾಸಕರು ತಿಳಿಸಿದರು.

ಎದೆಹುಬ್ಬಿಸಿ ನಡೆಯಿರಿ ಸರಕಾರ ನಮ್ಮದೇ: ಎಂ.ಬಿ. ವಿಶ್ವನಾಥ ರೈ

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಾಕಿತ್ತು ಎನ್ನುವಷ್ಟರ ಮಟ್ಟಿಗೆ ರಾಜ್ಯದ ಬಿಜೆಪಿ ಅಡಳಿತ ಜನರಿಗೆ ಬೇಡವಾಗಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಜನ ಸಮಾಧಾನಪಡುವಂತಾಯಿತು. ಪುತ್ತೂರಿನಲ್ಲಿ ನಮ್ಮದೇ ಶಾಸಕರಿದ್ದು ರಾಜ್ಯದಲ್ಲಿ ನಮ್ಮದೇ ಸರಕಾರ ಇದೆ. ಇಷ್ಟು ದಿನ ತಲೆಬಾಗಿದ್ದು ಸಾಕು. ಇನ್ನು ಎದೆ ಉಬ್ಬಿಸಿ ನಡೆಯಿರಿ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ ಹೇಳಿದರು.

ಪುತ್ತೂರಿಗೂ ಐದು ಗ್ಯಾರಂಟಿ : ಹೇಮನಾಥ ಶೆಟ್ಟಿ

ರಾಜ್ಯದಲ್ಲಿ ಕಾಂಗ್ರೆಸ್ ಜನತೆಗೆ ಐದು ಗ್ಯಾರಂಟಿ ಕೊಟ್ಟಿದ್ದರೆ ಪುತ್ತೂರು ಶಾಸಕರು ಕ್ಷೇತ್ರಕ್ಕೆ ಐದು ಗ್ಯಾರಂಟಿಯನ್ನು ಕೊಟ್ಟಿದ್ದಾರೆ ಎಂದು ಕೆಪಿಸಿಸಿ ಕಾಯಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಹೇಳಿದರು.

ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಕೆಎಂಎಫ್ ಸ್ಥಳಾಂತರ, ಕೊಯಿಲ ಜಾನುವಾರು ಕೇಂದ್ರದ ಅಭಿವೃದ್ದಿ ಮತ್ತು ಪುತ್ತೂರು ನಗರದಲ್ಲಿ ಸಮಗ್ರ ಅಭಿವೃದ್ದಿ ಈ ಐದು ಗ್ಯಾರಂಟಿಯನ್ನು ಶಾಸಕರು ನೀಡಿದ್ದಾರೆ. ಇವುಗಳ ಪೈಕಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 960 ಕೋಟಿ ರೂ. ಬಿಡುಗಡೆಯಾಗಿದೆ. ನಗರದ ಚರಂಡಿ ಕಾಮಗಾರಿಗೂ 500 ಕೋಟಿ ರೂ. ಬಿಡುಗಡೆಯಾಗಿದೆ. ಕೆಎಂಎಫ್ ಸ್ಥಳಾಂತರಕ್ಕೆ ಜಾಗ ನಿಗದಿಪಡಿಸಲಾಗಿದೆ. ಜಾನುವಾರು ಕೆಂದ್ರಕ್ಕೂ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದ ಅವರು, ಈ ಐದು ಗ್ಯಾರಂಟಿಗಳು ಜಾರಿಯಾದ ಬಳಿಕ ಪುತ್ತೂರಿನ ಚಿತ್ರಣವೇ ಬದಲಾಗಲಿದೆ. ಇಲ್ಲಿನ ಸಾವಿರಾರು ಯುವಕರಿಗೆ ಉದ್ಯೋಗ ದೊರೆಯಲಿದೆ. ಜನರ ಓಡಾಟ ಹೆಚ್ಚಾಗಿ ಪುತ್ತೂರಿನಲ್ಲಿ ವ್ಯಾಪಾರ, ವ್ಯವಹಾರ ಜಾಸ್ತಿಯಗಲಿದ್ದು ಒಟ್ಟಿನಲ್ಲಿ ಮುಂದೆ ಪುತ್ತೂರು ಜನತೆಗೆ ನೆಮ್ಮದಿಯ ದಿನಗಳು ಖಂಡಿತವಾಗಿಯೂ ಬರುತ್ತದೆ ಎಂದು ಹೇಳಿದರು.

ಶಾಸಕರಿಗೆ ಗಟ್ಸ್ ಇದೆ ಎಂಬುದು ಜನತೆಗೆ ಗೊತ್ತಾಗಿದೆ: ಬಡಗನ್ನೂರು

ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಮಾತನಾಡಿ, ಶಾಸಕ ಅಶೋಕ್ ರೈ ಅವರಿಗೆ ಗಟ್ಸ್ ಇದೆ ಎಂಬುದು ಜನರಿಗೆ ಗೊತ್ತಾಗಿದೆ. ಈ ಕಾರಣಕ್ಕೆ ಅವರು ಹೋದಲ್ಲೆಲ್ಲಾ ಜನ ಸುತ್ತುವರಿಯುತ್ತಾರೆ. ನುಡಿದಂತೆ ನಡೆಯುವ ಮೂಲಕ ಶಾಸಕರು ಜನ ಮೆಚ್ಚುಗೆ ಗಳಿಸಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ಸನ್ನು ಮರೆಯದಿರಿ: ಅಮಲರಾಮಚಂದ್ರ

ಕಳೆದ ಮೂರು ತಿಂಗಳ ಹಿಂದೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಜನತೆಗೆ ನೆಮ್ಮದಿಯ ಜೀವನವನ್ನು ನೀಡಿದೆ, ಎಲ್ಲರ ಖಾತೆಗೂ ಹಣ ಬಂದಿದೆ, ನಾವು ಸುಳ್ಳು ಹೇಳಿ ಮೋಸ ಮಾಡುವವರಲ್ಲ ನಮ್ಮದೇನಿದ್ದರೂ ನುಡಿದಂತೆ ನಡೆಯುವ ಜಾಯಾಮಾನವಾಗಿದ್ದು ನೆಮ್ಮದಿಯ ಬದುಕು ನೀಡಿದ ಕಾಂಗ್ರೆಸ್ಸನ್ನು ಯಾರೂ ಮರೆಯಬಾರದು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತದಾನ ಮಾಡಬೇಕು ಎಂದು ಬ್ಲಾಕ್ ಕಾಂಗ್ರೆಸ್ ಪ್ರ. ಕಾರ್ಯದರ್ಶಿ ಅಮಲರಾಮಚಂದ್ರ ಮನವಿ ಮಾಡಿದರು.

ಹೇಮನಾಥ ಶೆಟ್ಟಿಗೆ ಅರಣ್ಯ ನಿಗಮ ಕೊಡಿ: ಆಗ್ರಹ

ಸಭೆಯಲ್ಲಿ ಮಾತನಾಡಿದ ಕೊಳ್ತಿಗೆ ಗ್ರಾ.ಪಂ. ಉಪಾಧ್ಯಕ್ಷ ಕೆ.ಎಸ್. ಪ್ರಮೋದ್‌ರವರು, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಕಾವು ಹೇಮನಾಥ ಶೆಟ್ಟಿಯವರು ಪಕ್ಷಕ್ಕಾಗಿ ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿದವರು. ಅವರಿಗೆ ಸರಕಾರ ಉನ್ನತ ಹುದ್ದೆಯನ್ನು ನೀಡಬೇಕು. ಅರಣ್ಯ ನಿಗಮದ ಅಧ್ಯಕ್ಷರಾಗಿ ನೇಮಕ ಮಾಡಬೇಕು ಎಂದು ಸಭೆಯಲ್ಲಿ ಹೇಳಿದಾಗ ಸಭೆಯಲ್ಲಿದ್ದ ಕಾರ್ಯಕರ್ತರು ಒಕ್ಕೊರಳಿನಿಂದ ಅನುಮೋದನೆ ಮಾಡಿದರು.

ಶಾಸಕರು ಈ ವಿಚಾರವನ್ನು ಸರಕಾರದ ಗಮನಕ್ಕೆ ತರಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಹೇಮನಾಥ ಶೆಟ್ಟಿಯವರು ಹಿರಿಯರು ಅವರನ್ನು ಬಿಟ್ಟು ಹಾಕುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಇದೇ ಸಂದರ್ಭ ಸಭೆಯಲ್ಲಿ ಶಾಸಕರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ವಲಯಾಧ್ಯಕ್ಷ ವೆಂಕಟ್ರಮಣ ಗೌಡ, ಮಾಜಿ ಜಿಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಲರಾಮಚಂದ್ರ, ಪ್ರದೀಪ್‌ ಕುಮಾರ್ ಪಾಂಬಾರು, ಕೊಳ್ತಿಗೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಶ್ರೀಧರ್ ಪೂಜಾರಿ, ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಮುರಳೀದರ ಎಸ್.ಪಿ., ಗ್ರಾಪಂ ಸದಸ್ಯರುಗಳಾದ ಪವನ್ ಡಿ.ಜಿ., ಕೊಳ್ತಿಗೆ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ವಸಂತ ಕುಮಾರ ರೈ ದುಗ್ಗಳ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶಾರದಾ, ಉಪಾಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ಸಾಮಾಜಿಕ ಜಾಲತಾಣದ ಸಿದ್ದಿಕ್ ಸುಲ್ತಾನ್, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಪಾಣಜೆ, ಗ್ರಾಪಂ ಅಧ್ಯಕ್ಷ ಅಕ್ಕಮ್ಮ, ಕೊಳ್ತಿಗೆ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷೆ ಲಕ್ಷ್ಮಿ ಕೆ.ಜಿ., ಗ್ರಾಪಂ ಸದಸ್ಯರು, ಸಹಕಾರಿ ಸಂಘದ ನಿರ್ದೇಶಕರು, ಹಾಲು ಉತ್ಪಾದಕರ ಸಂಘದ ನಿರ್ದೇಶಕರು, ಕಾಂಗ್ರೆಸ್ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು. ಕೊಳ್ತಿಗೆ ಗ್ರಾಪಂ ಉಪಾಧ್ಯಕ್ಷ ಪ್ರಮೋದ್ ಕೆ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿನೋದ್ ರೈ ಕೆಳಗಿನ ಮನೆ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top