ಧರ್ಮದ ನೆಲೆಯಲ್ಲಿ ಯೋಗ ಜಗತ್ತಿಗೇ ಪೂರಕ | ಆನಂದೋತ್ಸವ ಶಿಬಿರದಲ್ಲಿ  ಡಾ.ಎಚ್.ಮಾಧವ ಭಟ್

ಪುತ್ತೂರು: ಯೋಗ ಭಾರತದಲ್ಲಿ ಸಹಜವಾಗಿ ಹುಟ್ಟಿಬಂದ ಅಮೋಘ ಸಂಗತಿ. ಆದರೆ ಸುಲಭಸಾಧ್ಯವಾದ ವಿಷಯಗಳ ಬಗ್ಗೆ ಅನೇಕರಿಗೆ ನಿರ್ಲಕ್ಷ್ಯ ಹುಟ್ಟಿಕೊಳ್ಳುತ್ತದೆ. ಆದ್ದರಿಂದಲೇ ಇತ್ತೀಚೆಗಿನವರೆಗೆ ಯೋಗವನ್ನು ಗಂಭೀರವಾಗಿ ಪರಿಗಣಿಸುವ ಮನೋಭಾವ ಕಂಡುಬರುತ್ತಿರಲಿಲ್ಲ. ಈಗೀಗ ಯೋಗಾಭ್ಯಾಸದ ಮಹತ್ವವನ್ನು ಜನ ಅರಿಯಲಾರಂಭಿಸಿದ್ದಾರೆ ಎಂಬುದು ಆಶಾದಾಯಕ ಬೆಳವಣಿಗೆ ಎಂದು ವಿಶ್ರಾಂತ ಪ್ರಾಚಾರ್ಯ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಡಾ. ಎಚ್. ಮಾಧವ ಭಟ್ ಹೇಳಿದರು.

ಅಂಬಿಕಾ ಮಹಾವಿದ್ಯಾಲಯದ ತತ್ತ್ವಶಾಸ್ತ್ರ ವಿಭಾಗದ ವತಿಯಿಂದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ನೇತೃತ್ವದಲ್ಲಿ ಆಯೋಜಿಸಲಾದ ಮೂರು ದಿನಗಳ ಯೋಗ ತರಬೇತಿ ಕಾರ್ಯಕ್ರಮ ‘ಆನಂದೋತ್ಸವ ಶಿಬಿರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಧರ್ಮ ನಮ್ಮಲ್ಲಿ ಚಿಂತನೆಗಳನ್ನು, ಜ್ಞಾನವನ್ನು ತುಂಬುತ್ತದೆ. ಆ ಧರ್ಮದ ನೆಲೆಯಲ್ಲಿ ಜಗತ್ತಿಗೇ ಪೂರಕವಾದ ಯೋಗವೂ ಬೆಳೆದುಬಂದಿದೆ. ಇಂದು ಭಾರತೀಯ ಯೋಗ ವಿಶ್ವದಾದ್ಯಂತ ಪ್ರಸಾರ ಕಾಣುವಂತಾಗಿದೆ. ರವಿಶಂಕರ ಗುರೂಜಿಯಂತಹ ವ್ಯಕ್ತಿಗಳು ಯೋಗದ ಮಹತ್ವವನ್ನು ಸಾರುತ್ತಾ ಜಾಗೃತಿ ಮೂಡಿಸುತ್ತಿರುವುದು ಸ್ವಾಗತಾರ್ಹ ವಿಚಾರ. ವಿದ್ಯಾರ್ಥಿ ಜೀವನದಲ್ಲಿ ಇಂತಹ ಮಹತ್ವದ ಸಂಗತಿಗಳನ್ನು ಅರಿಯುವುದು ಮತ್ತು ಅಳವಡಿಸುವುದು ಅಗತ್ಯ ವಿಚಾರ ಎಂದು ಅಭಿಪ್ರಾಯಪಟ್ಟರು.































 
 

ಆರ್ಟ್ ಆಫ್ ಲಿವಿಂಗ್ನ ಶಿಕ್ಷಕಿ ಶರಾವತಿ ರವಿನಾರಾಯಣ ಮಾತನಾಡಿ, ಯೋಗ ನಮ್ಮ ಬದುಕಿನ ಭಾಗವಾಗಬೇಕು. ಭಾಗವಹಿಸುವವರ ಉತ್ಸಾಹ, ಆಯೋಜನೆ ಮಾಡುವ ಸಂಸ್ಥೆಯವರ ಬೆಂಬಲ ಇಂತಹ ಕಾರ್ಯಕ್ರಮಗಳಿಗೆ ಅತ್ಯಗತ್ಯ ಎಂದರು.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪಂಚಮಿ ಬಾಕಿಲಪದವು ಪ್ರಾರ್ಥಿಸಿದರು. ಕಾಲೇಜಿನ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಸ್ವಾಗತಿಸಿದರು. ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ ವಂದಿಸಿದರು. ತತ್ತ್ವಶಾಸ್ತ್ರ ವಿಭಾಗ ಮುಖ್ಯಸ್ಥ ವಿದ್ವಾನ್ ತೇಜಶಂಕರ ಸೋಮಯಾಜಿ ಕಾರ್ಯಕ್ರಮ ನಿರ್ವಹಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top