ಕಾವೇರಿ ನೀರಿಗಾಗಿ ಬೆಂಗಳೂರು ಬಂದ್ | ಫ್ರೀಡಂ ಪಾರ್ಕಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ರೈತ!!

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಇಂದು ಬೆಂಗಳೂರು ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬೆಳಗ್ಗೆ ಆರು ಗಂಟೆಯಿಂದಲೂ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ವ್ಯಾಪಾರ ವಹಿವಾಟು ಬಹುತೇಕ ಸ್ಥಗಿತಗೊಂಡಿದೆ.

ಇದರ ನಡುವೆ ರೈತರೊಬ್ಬರು ಫ್ರೀಡಂ ಪಾರ್ಕಿನಲ್ಲಿ ಆತ್ಮಹತ್ಯೆಗೂ ಯತ್ನಿಸಿದ ಘಟನೆ ನಡೆಯಿತು. ಮರಕ್ಕೆ ನೇಣು ಹಾಕಿಕೊಳ್ಳಲು ಯತ್ನಿಸುತ್ತಿದ್ದಾಗ ಪೊಲೀಸರು ತಡೆದಿದ್ದಾರೆ.

ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಿದ್ದು, ವಿಭಿನ್ನ ರೀತಿಯ ಪ್ರದರ್ಶನಗಳನ್ನು ಜನರು ಮುಂದಿಟ್ಟಿದ್ದಾರೆ. ಕೆಲವರು ಹೆಣದ ರೀತಿಯಲ್ಲೇ ಮಲಗಿ, ಇನ್ನೂ ಕೆಲವರು ರಸ್ತೆಯಲ್ಲಿ ಉರುಳಾಡುತ್ತಾ ತಮ್ಮ ಆಕ್ರೋಶವನ್ನು ಹೊರಗೆಡವಿದ್ದಾರೆ.



































 
 

ಶಾಪಿಂಗ್ ಮಾಲ್ ಗಳು ಕ್ಲೋಸ್ ಆಗಿದ್ದು, ಅವುಗಳ ಮುಂದೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ವಾಹನಗಳ ದಟ್ಟಣೆಯಿಂದ ತುಂಬಿರುತ್ತಿದ್ದ ರಸ್ತೆಗಳು ಬಣಗುಡುತ್ತಿವೆ, ಸದಾ ಗಿಜಿಗುಡುತ್ತಿದ್ದ ಏರಿಯಾಗಳು ಖಾಲಿ, ಖಾಲಿ ಹೊಡೆಯುತ್ತಿವೆ.

ಬಿಎಂಟಿಸಿ ಹಾಗೂ ಕೆ.ಎಸ್.ಆರ್.ಟಿ.ಸಿ. ಬಸ್ ಗಳ ಸಂಚಾರವಿದ್ದರೂ ಪ್ರಯಾಣಿಕರಿಲ್ಲದೆ ಜನದಟ್ಟಣೆ ಪ್ರದೇಶಗಳಾದ ಮೆಜೆಸ್ಟಿಕ್, ಕೆ ಆರ್ ಮಾರ್ಕೆಟ್ ಮತ್ತಿತರ ಕಡೆಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ತೀರಾ ವಿರಳವಾಗಿದೆ. ಬಂದ್ ನಿಂದಾಗಿ ರಾಜ್ಯದಲ್ಲಿ ಜನದಟ್ಟಣೆಯ ಬಸ್ ನಿಲ್ದಾಣಗಳಲ್ಲಿ ಒಂದಾದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕಾಣುತ್ತಿಲ್ಲ ಎಂದು ಕಂಡಕ್ಟರೊಬ್ಬರು ಹೇಳಿದರು.

ಖಾಸಗಿ ಸಾರಿಗೆ ಒಕ್ಕೂಟ ಬೆಂಗಳೂರು ಬಂದ್ ಗೆ ಬೆಂಬಲ ಸೂಚಿಸಿದ್ದು, ಮಕ್ಕಳ ಸುರಕ್ಷತೆ ದೃಷ್ಟಿಯಂದ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ನಗರದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸುವ ಮೂಲಕ ಬಿಗಿ ಭದ್ರತೆ ಒದಗಿಸಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top