ಶ್ರೀ ಶಾರದಾ ಭಜನಾ ಮಂದಿರದಲ್ಲಿ 89ನೇ ವರ್ಷದ ವೈಭವದ ‘ಪುತ್ತೂರು ಶಾರದೋತ್ಸವ’ | ಪಯ್ಯನ್ನೂರಿನ ಜ್ಯೋತಿಷ್ಯರ ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ನಡೆಯಲಿದೆ ಈ ಬಾರಿಯ ಶಾರದೋತ್ಸವ | ಸ್ತಬ್ಧಚಿತ್ರ ಸಹಿತ ವೈಭವದ ಶೋಭಾಯಾತ್ರೆ

ಪುತ್ತೂರು: ಇತಿಹಾಸ ಹೊಂದಿರುವ ಇಲ್ಲಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಈ ಬಾರಿ 89ನೇ ವರ್ಷದ ಶಾರದೋತ್ಸವ ನಡೆಯಲಿದ್ದು, ಸಾಂಸ್ಕೃತಿಕ, ಸಭಾ ಕಾರ್ಯಕ್ರಮಗಳೊಂದಿಗೆ ಅತ್ಯಂತ ವೈಭವದಿಂದ ‘ಪುತ್ತೂರು ಶಾರದೋತ್ಸವ” ನಡೆಯಲಿದೆ ಎಂದು ಶಾರದೋತ್ಸವ ಸಮಿತಿ ಅಧ್ಯಕ್ಷ ರಾಜೇಶ್ ಬನ್ನೂರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಶ್ರೀ ಶಾರದಾ ಭಜನಾ ಮಂದಿರ ಹಾಗೂ ಬಲ್ನಾಡು ಶ್ರೀ ಉಳ್ಳಾಲ್ತಿ ದೈವಸ್ಥಾನ ಅವಿನಾಭಾವ ಸಂಬಂಧ ಹೊಂದಿದ್ದು, ಹಿಂದೊಮ್ಮೆ ಯಾವುದೋ ಮಹಾರೋಗ ಪುತ್ತೂರನ್ನು ಬಾಧಿಸಿದ ಸಂದರ್ಭ ಸುಬ್ರಾಯ ಕಲ್ಲೂರಾಯ ಹಾಗೂ ಮಂಜುನಾಥ ಆಚಾರ್ಯ ಎಂಬವರು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಮೊರೆ ಹೋಗಿದ್ದರು. ಈ ಸಂದರ್ಭ ಭಜನಾ ಮಂದಿರದಲ್ಲಿ ಪ್ರತಿನಿತ್ಯ ಭಜನೆ ನಡೆಸಬೇಕು. ಅಲ್ಲದೆ ಶೃಂಗೇರಿ ಶಾರದೆಯ ಫೋಟೊವನ್ನು ಕುತ್ತಿಗೆಗೆ ಕಟ್ಟಿ ಪ್ರತೀ ಮನೆಗಳಿಗೆ ಭಜನೆ ಮೂಲಕ ತೆರಳಿ ಪ್ರಸಾದ ನೀಡಬೇಕು ಎಂದು ತಿಳಿಸಿದ್ದರಂತೆ. ಅದರಂತೆ ಕೈಗೊಂಡಾಗ ರೋಗ ಸಂಪೂರ್ಣ ವಾಸಿಯಾಗಿತ್ತು. ಅದರಂತೆ ಈಗಲೂ ಜನವರಿ 16 ರಂದು ಮಕರ ಸಂಕ್ರಮಣದಂದು ಈ ರೀತಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಇತ್ತೀಚೆಗೆ ಪಯ್ಯನ್ನೂರಿನಲ್ಲಿ ಜ್ಯೋತಿಷ್ಯರ ಬಳಿ ತೆರಳಿ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಂತೆ  ಶ್ರೀ ಶಾರದೆಯ ಹೆಸರಿನಲ್ಲಿ ಪುತ್ತೂರಿನಲ್ಲಿ ನವರಾತ್ರಿ ಸಂದರ್ಭ ಯಾರೆಲ್ಲಾ ವೇಷ ಹಾಕುತ್ತಾರೆ ಅವರೆಲ್ಲಾ ಭಜನಾ ಮಂದಿರದಲ್ಲಿ ನಡೆಯುವ ಶಾರದೋತ್ಸವದ ಪ್ರತೀ ಕಾರ್ಯಕ್ರಮ ಸಹಿತ ಶಾರದೋತ್ಸವ ಶೋಭಾಯಾತ್ರೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಕಂಡು ಬಂದಿದೆ. ಪಾಲ್ಗೊಂಡ ವೇಷಧಾರಿಗಳಿಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆರೆಯ ತೀರ್ಥ ತಂದು ಪ್ರೋಕ್ಷಣೆ ಮಾಡಲಾಗುವುದು. ಅದರಂತೆ ಈ ಎಲ್ಲಾ ಬಾರಿ ಸಿದ್ಧತೆ ನಡೆಸಲಾಗುತ್ತಿದೆ  ಎಂದು ತಿಳಿಸಿದ ಅವರು, ಈ ಬಾರಿ ಬೇರೆ ಜಿಲ್ಲೆಗಳಿಗೆ ದಸರಾ ಉತ್ಸವ ನೋಡಲು ತೆರಳುವ ಜನರು ಈ ಬಾರಿ ಬೇರೆಡೆ ಹೋಗದೆ ಶ್ರೀ ಭಜನಾ ಮಂದಿರದ ಶಾರದೋತ್ಸವವನ್ನು ಕಣ್ತುಂಬಿಕೊಳ್ಳಬೇಕು. ಅಲ್ಲದೆ ಶೋಭಾಯಾತ್ರೆ ದಿನ ಹಿಂದೂ ಬಾಂಧವರು ತಮ್ಮ ಅಂಗಡಿಗಳನ್ನು ವಿದ್ಯುತ್ ದೀಪ, ತಳಿರು-ತೋರಣಗಳಿಂದ ಅಲಂಕೃತಗೊಳಿಸಬೇಕು ಎಂದು ಅವರು ವಿನಂತಿಸಿದರು.































 
 

ಪ್ರತೀ ದಿನ ಸಾಂಸ್ಕೃತಿಕ ಕಾರ್ಯಕ್ರಮ:

ಪುತ್ತೂರು ಶಾರದೋತ್ಸವ ಸಮಿತಿ ಸಂಚಾಲಕ ಪಿ.ಜಿ.ಜಗನ್ನಿವಾಸ ರಾವ್ ಮಾತನಾಡಿ, ಒಂಭತ್ತು ದಿನಗಳ ಕಾಲ ನಡೆಯುವ ಶ್ರೀ ಶಾರದೋತ್ಸವದಲ್ಲಿ ಪ್ರತೀ ದಿನ ಸಾಂಸ್ಕೃತಿಕ, ಭಜನೆ ಕಾರ್ಯಕ್ರಮಗಳು ಸೇವಾ ರೂಪದಲ್ಲಿ ನಡೆಯಲಿದೆ. ಇದಕ್ಕಾಗಿ ಈಗಾಗಲೇ 16 ತಂಡ ನೋಂದಾವಣೆ ಮಾಡಿಕೊಂಡಿದೆ. ಸಾಂಸ್ಕೃತಿಕ ಕಾರ್ಯಕ್ರಮ ನಿಗದಿತ ಸಮಯದಲ್ಲಿ ನಡೆಯಲಿದ್ದು, ಸಂಜೆ 7 ರಿಂದ 8.30 ರ ತನಕ ಭಜನೆ ನಡೆಯಲಿದೆ. ಅಲ್ಲದೆ ಪ್ರತೀ ದಿನ ಓರ್ವ ಗಣ್ಯರು ದೀಪ ಬೆಳಗಿಸಿ ಶುಭ ಹಾರೈಸಲಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯ ನಾನಾ ಭಾಗಗಳಿಂದ ಭಾಗವಹಿಸುವ ಸ್ತಬ್ಧಚಿತ್ರಗಳಿಗೆ ಮುಕ್ತ ಅವಕಾಶ :

ಶೋಭಾಯಾತ್ರೆ ಸಂಚಾಲಕ ಸೀತಾರಾಮ ರೈ ಕೆದಂಬಾಡಿಗುತ್ತು ಮಾತನಾಡಿ, ಜಿಲ್ಲೆಯ ನಾನಾ ಭಾಗಗಳಿಂದ ಪಾಲ್ಗೊಳ್ಳುವ ತಂಡಗಳಿಗೆ ಮುಕ್ತ ಅವಕಾಶ ಮಾಡಲಾಗಿದೆ. ವಿಶೇಷವಾಗಿ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ಸ್ತಬ್ಧಚಿತ್ರಗಳಿ ಬಹುಮಾನ ಘೋಷಿಸಲಾಗಿದ್ದು, ಅತ್ಯಂತ ಶಿಸ್ತುಬದ್ಧವಾಗಿ ಪ್ರದರ್ಶನ ಮಾಡುವ ಸ್ತಬ್ದಚಿತ್ರಕ್ಕೆ ಪ್ರಥಮ ಬಹುಮಾನವಾಗಿ ಒಂದು ಲಕ್ಷ ರೂ., ದ್ವಿತೀಯ 50 ಸಾವಿರ ರೂ. ಬಹುಮಾನ ನೀಡಲಾಗುವುದು. ಈ ನಿಟ್ಟಿನಲ್ಲಿ ಈ ಬಾರಿ ಶೋಭಾಯಾತ್ರೆಯನ್ನು ಅಚ್ಚುಕಟ್ಟಾಗಿ ಏರ್ಪಡಿಸುವ ಕುರಿತು ನಿರ್ಣಯಿಸಲಾಗಿದೆ. ಶೋಭಾಯಾತ್ರೆಗೆ ಬೊಳುವಾರಿನಲ್ಲಿ ಸಂಜೆ 5 ಗಂಟೆಗೆ ಚಾಲನೆ ನೀಡಲಾಗುವುದು. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಕೋರಿದ ಅವರು, ಪುತ್ತೂರು ಶಾರದೋತ್ಸವದ ಆಮಂತ್ರಣ ಪತ್ರಿಕೆ ಸೆ.29 ರಂದು ಬಿಡೆಗಡೆಗೊಳ್ಳಲಿದೆ ಎಂದು ತಿಳಿಸಿದರು.

ಪುತ್ತೂರು ಶಾರದೋತ್ಸವ ಇತಿಹಾಸ ನಿರ್ಮಿಸಲಿದೆ :

ಸಮಿತಿ ಕಾರ್ಯದರ್ಶಿ ಮುರಳೀಕೃಷ್ಣ ಹಸಂತಡ್ಕ ಮಾತನಾಡಿ, ಪ್ರಾಚೀನ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಈ ಬಾರಿ ನಡೆಯುವ ಪುತ್ತೂರು ಶಾರದೋತ್ಸವ ಇತಿಹಾಸ ನಿರ್ಮಿಸಲಿದೆ. ಸುಮಾರು 40 ರಿಮದ 50 ಭಜನಾ ತಂಡಗಳ ಸಾವಿರಕ್ಕೂ ಅಧಿಕ ಭಜನಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಈ ಬಾರಿ ಅತ್ಯಂತ ವಿಜೃಂಭಣೆಯಿಂದ ಪುತ್ತೂರು ಶಾರದೋತ್ಸವ ನಡೆಯಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ  ಅಜಿತ್ ರೈ ಹೊಸಮನೆ, ಭಜನಾ ಮಂದಿರದ ಅಧ್ಯಕ್ಷ ಸಾಯಿರಾಂ, ಕೋಶಾಧಿಕಾರಿ ತಾರನಾಥ ಎಚ್‍., ಕಾರ್ಯದರ್ಶಿ ಜಯಂತ ಉರ್ಲಾಂಡಿ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top