ನವದೆಹಲಿ: ಮಹಾತ್ಮ ಗಾಂಧಿ ಜಯಂತಿಗೂ ಒಂದು ದಿನ ಮೊದಲು ಅಂದರೆ ಅಕ್ಟೋಬರ್ 1ರಂದು ದೇಶಾದ್ಯಂತ ಸ್ವಚ್ಛತಾ ಅಭಿಯಾನ ಕೈಗೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಅಕ್ಟೋಬರ್ 1ರಂದು ಒಂದು ಗಂಟೆ ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಮೂಲಕ ಮಹಾತ್ಮ ಗಾಂಧೀಜಿ ಅವರಿಗೆ ಗೌರವ ಸಲ್ಲಿಸೋಣ ಎಂದು ಮನ್ ಕಿ ಬಾತ್ ರೇಡಿಯೊ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಕರೆ ನೀಡಿದ್ದಾರೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವು ಅಭಿಯಾನದ ಕುರಿತು ಮಾಹಿತಿ ಹಂಚಿಕೊಂಡಿದೆ.
ಸ್ವಚ್ಛತಾ ಅಭಿಯಾನದ ಕುರಿತು ಕೇಂದ್ರ ವಸತಿ ಹಾಗೂ ನಗರಾಭಿವೃದ್ಧಿ ಸಚಿವಾಲಯವು ಅಭಿಯಾನದ ಕುರಿತು ಮಾಹಿತಿ ನೀಡಿದೆ. “ಏಕ್ ತಾರೀಖ್, ಏಕ್ ಘಂಟಾ, ಏಕ್ ಸಾಥ್” ಎಂಬುದು ಅಭಿಯಾನದ ಹೆಸರಾಗಿದೆ. “ಸಾರ್ವಜನಿಕ ಸ್ಥಳಗಳಾದ ಮಾರುಕಟ್ಟೆ, ರೈಲ್ವೆ ಹಳಿ, ಪ್ರವಾಸಿ ತಾಣಗಳು, ಧಾರ್ಮಿಕ ಸ್ಥಳಗಳು ಸೇರಿ ಹಲವೆಡೆ ಅಕ್ಟೋಬರ್ 1ರಂದು ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಗುತ್ತಿದೆ. ದೇಶದ ನಾಗರಿಕರು ಸ್ವಯಂಪ್ರೇರಿತರಾಗಿ ಅಭಿಯಾನದಲ್ಲಿ ಪಾಲ್ಗೊಳ್ಳಿ” ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.
“ದೇಶದ ಪ್ರತಿಯೊಂದು ನಗರ, ಪಟ್ಟಣ, ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಗುತ್ತಿದೆ. ಮಹಾತ್ಮ ಗಾಂಧೀಜಿ ಅವರಿಗೆ ಗೌರವ ಸಲ್ಲಿಸುವ ದೃಷ್ಟಿಯಿಂದ ಅಭಿಯಾನ ಕೈಗೊಳ್ಳಲಾಗುತ್ತಿದ್ದು, ಬೆಳಗ್ಗೆ 10 ಗಂಟೆಯಿಂದ 11 ಗಂಟೆವರೆಗೆ ಸ್ವಚ್ಛತೆಯಲ್ಲಿ ಪಾಲ್ಗೊಳ್ಳಿ” ಎಂಬುದಾಗಿ ಮನವಿ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಜತೆಗೆ ಕೇಂದ್ರ ಸಚಿವರು, ಶಾಸಕರು, ಸಂಸದರು, ಶಾಸಕರು, ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಕೂಡ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಸ್ವಚ್ಛತಾ ಅಭಿಯಾನದ ಕುರಿತು ಹೆಚ್ಚಿನ ಮಾಹಿತಿಗೆ, ಕಾರ್ಯಕ್ರಮಗಳ ವಿವರಕ್ಕೆ ವೆಬ್ಪೋರ್ಟಲ್ಅನ್ನು ಕೂಡ ಕೇಂದ್ರ ಸರ್ಕಾರ ಆರಂಭಿಸಿದೆ. ಸಾರ್ವಜನಿಕರು https://swachhatahiseva.com/ ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ಗಾಂಧಿ ಜಯಂತಿಯಂದೇ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ್ದರು.