ಸದ್ಯವೇ ಪುತ್ತೂರಿನಲ್ಲಿ ಬೃಹತ್ ಮಹಿಳಾ ಸಮಾವೇಶ | ಕೆಯ್ಯೂರು ಮಹಿಳಾ ಕಾಂಗ್ರೆಸ್ ಘಟಕ ಉದ್ಘಾಟಿಸಿ ಶಾಸಕ ಅಶೋಕ್ ರೈ

ಪುತ್ತೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಆಗಿದ್ದು, ಮುಂದಿನ ದಿನಗಳಲ್ಲಿ ಮಹಿಳೆಯರೆ ಕಾಂಗ್ರೆಸ್ ಗೆ ಶಕ್ತಿ ತುಂಬಲಿದ್ದಾರೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಕಾಂಗ್ರೆಸ್ ಮುಖಂಡ ಸಂತೋಷ್ ರೈ ಇಳಂತಾಜೆ ನಿವಾಸದಲ್ಲಿ ಕೆಯ್ಯೂರು ವಲಯ ಮಹಿಳಾ ಕಾಂಗ್ರೆಸ್ ಘಟಕ ಉದ್ಘಾಟಿಸಿ ಮಾತನಾಡಿದರು.

ಈಗಾಗಲೇ ಐದು ಗ್ಯಾರಂಟಿಗಳನ್ನು ಸರಕಾರ ಜಾರಿಗೆ ತಂದಿದೆ. ಈ ಐದು ಗ್ಯಾರಂಟಿಗಳಲ್ಲಿ ಬಹುತೇಕ ಮಹಿಳೆಯರನ್ನೇ ಮುಂದಿಟ್ಟುಕೊಂಡು ಮಾಡಲಾಗಿದೆ. ಶಕ್ತಿ ಯೋಜನೆ, ಅನ್ನ ಭಾಗ್ಯ ಯೋಜನೆ, ಉಚಿತ ವಿದ್ಯುತ್ ಬಿಲ್ ಮತ್ತು ಗೃಹಲಕ್ಷ್ಮೀ ಯೋಜನೆಯಿಂದ ಪ್ರತಿಯೊಂದು ಕುಟುಂಬಕ್ಕೂ ಶಕ್ತಿ ತುಂಬುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಮುಂದಿನ ದಿನಗಳಲ್ಲಿ ಪ್ರತೀ ಬೂತ್ ಗಳಲ್ಲಿ ಮಹಿಳಾ ಘಟಕವನ್ನು ನಿರ್ಮಾಣ ಮಾಡುವ ಮೂಲಕ ಮಹಿಳೆಯರೇ ಮುಂಚೂಣಿಯಲ್ಲಿ ನಿಂತು ಸರಕಾರದ ಗ್ಯಾರಂಟಿಯನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.































 
 

6 ತಿಂಗಳ ಬಳಿಕ ಬೃಹತ್ ಮಹಿಳಾ ಸಮಾವೇಶ :

ಪ್ರತೀ ಬೂತ್‌ಗಳಲ್ಲಿ ಮಹಿಳಾ ಘಟಕ ನಿರ್ಮಾಣವಾದ ಬಳಿಕ ಪುತ್ತೂರಿನಲ್ಲಿ ಬೃಹತ್ ಮಹಿಳಾ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಸಾವಿರಾರು ಮಂದಿ ಮಹಿಳೆಯರೆ ಭಾಗವಹಿಸಲಿದ್ದಾರೆ. ಸರಕಾರದ ಯವುದೇ ಯೋಜನೆ ಪ್ರಚಾರ ಪಡೆಯಬೇಕು ಮತ್ತು ಅದು ಕಟ್ಟಕಡೇಯ ಕುಟುಂಬಕ್ಕೂ ತಲುಪಬೇಕಾದರೆ ಮಹಿಳೆಯರೇ ಕಾರಣಕರ್ತರಾಗಲಿದ್ದಾರೆ. ಮುಂದಿನ 5 ವರ್ಷಗಳ ಬಳಿಕ ಮತ್ತೆ ಐದು ಗ್ಯಾರಂಟಿಯನ್ನು ನೀಡಲಿದೆ. ಬಡವರು ಬಡವರಾಗಿಯೇ ಉಳಿಯಬಾರದು. ಬಡವರಿಗೂ ಸಂತೃಪ್ತಿ ಜೀವನ ನಡೆಸುವಂತಾಗಬೇಕು ಎಂಬುದೇ ಸರಕಾರದ ಉದ್ದೇಶ ಎಂದು ಹೇಳಿದರು.

ಬಿಜೆಪಿಯವರು ನಯಾ ಪೈಸೆ ಕೊಟ್ಟಿದ್ದಾರಾ? :

ಹಲವು ಬಾರಿ ರಾಜ್ಯದಲ್ಲಿ ಅಧಿಕಾರ ನಡೆಸಿದ ಬಿಜೆಪಿ ಸರಕಾರ ಈ ರಾಜ್ಯದಲ್ಲಿ ಅರಾಜಕತೆಯನ್ನು ಸೃಷ್ಟಿಸಿ, ಭ್ರಷ್ಟಾಚಾರ ಮಾಡಿ ಸರಕಾರದ ಖಜಾನೆ ಖಾಲಿ ಮಾಡಿದ್ದೇ ವಿನಃ ಬಡವರಿಗೆ ನಯಾ ಪೈಸೆ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದ ಶಾಸಕರು, ಬಿಜೆಪಿಗರಿಗೆ ಲೂಟಿ ಮಾಡಲು ಮಾತ್ರ ಸರಕಾರ ಬೇಕಾಗಿದೆ. ಬಡವರ ಪರ ಕಾಳಜಿಯೇ ಇಲ್ಲ ಎಂದು ಹೇಳಿದರು.

ಅಭಿವೃದ್ದಿಯೇ ನಮ್ಮ ಧ್ಯೇಯ: ಎಂ.ಬಿ ವಿಶ್ವನಾಥ ರೈ

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ ಮಾತನಾಡಿ, ಕಾಂಗ್ರೆಸ್ ಅಂದ್ರೆ ಅಭಿವೃದ್ದಿ. ಬಡವರಿಗೆ ನ್ಯಾಯ ಒದಗಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಅಧಿಕಾರಕ್ಕೆ ಬಂದ ಬಳಿಕ ಸಂಪತ್ತನ್ನು ಲೂಟಿ ಮಾಡುವ ಕೆಲಸವನ್ನು ಕಾಂಗ್ರೆಸ್ ಎಂದೂ ಮಾಡಿಲ್ಲ. 40 ಶೇ. ಕಮಿಷನ್ ಪಡೆದು ಜನರ ಹಣವನ್ನು ತಿಂದು ತೇಗಿದ ಬಿಜೆಪಿಗೆ ಜನ ತಕ್ಕ ಪಾಠ ಕಲಿಸಿದ್ದಾರೆ ಎಂದರು.

ಪುತ್ತೂರು ಬದಲಾಗುತ್ತಿದೆ: ಹೇಮನಾಥ ಶೆಟ್ಟಿ

ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಮುಂದಿನ ಕೆಲವೇ ತಿಂಗಳಲ್ಲಿ ಪುತ್ತೂರಿನ ಚಿತ್ರಣವೇ ಬದಲಾಗಲಿದೆ. ಗಟ್ಸ್ ಇರುವ ಶಾಸಕರು ನಮ್ಮಲ್ಲಿದ್ದಾರೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಮೂಲಕ ಜನರ ಹಣ ಕೊಳ್ಳೆ ಹೋಗದಂತೆ ಶಾಸಕರು ವ್ಯವಸ್ಥೆಯನ್ನು ಮಾಡಿದ್ದು, ಪುತ್ತೂರಿನ ಇತಿಹಾಸದಲ್ಲೇ ಮೊದಲ ಬಾರಿಯಾಗಿದೆ ಎಂದು ಹೇಳಿದರು.

ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಕಾಂಗ್ರೆಸ್ ಸರಕಾರದ ಅಭಿವೃದ್ದಿ ಯೋಜನೆಗಳ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಶಾಸಕರನ್ನು ಸನ್ಮಾನಿಸಲಾಯಿತು.

ಕೆಯ್ಯೂರು ವಲಯ ಕಾಂಗ್ರೆಸ್ ಅಧ್ಯಕ್ಷ ಎ.ಕೆ. ಜಯರಾಮ ರೈ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡ ಸಂತೋಷ್ ರೈ ಇಳಂತಾಜೆ, ಕೆಯ್ಯೂರು ಗ್ರಾಪಂ ಸದಸ್ಯರಾದ ಅಬ್ದುಲ್ ಖಾದರ್ ಮೇರ್ಲ, ಕೆ.ಎಂ. ಹನೀಫ್ ಮಾಡಾವು, ಕಾಂಗ್ರೆಸ್ ಎಸ್‌ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ, ಕಾಂಗ್ರೆಸ್ ವಕ್ತಾರ ಅಮಲ ರಾಮಚಂದ್ರ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಪಾಣಾಜೆ, ಸಾಮಾಜಿಕ ಜಾಲತಾಣದ ಸಿದ್ದಿಕ್ ಸುಲ್ತಾನ್, ನಗರ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಶಾರದಾ ಅರಸ್, ವಿಶಾಲಾಕ್ಷಿ ಬನ್ನೂರು, ಜಯಂತ ಪೂಜಾರಿ ಕೆಂಗುಡೇಲು, ದಾಮೋದರ ಪೂಜಾರಿ ಚಂದ್ರಶೇಖರ ಕಣಿಯಾರು, ಕೆಯ್ಯೂರು ಮಹಿಳಾ ಘಟಕದ ಅಧ್ಯಕ್ಷೆ ಸುಜಯ ಗಂಗಾಧರ್, ಭವಾನಿ ಪಲ್ಲತ್ತಡ್ಕ, ಗೋಪಾಲ ಪೂಜಾರಿ ಕಣಿಯಾರು, ಹರಿನಾಥ ಕೂಡೇಲು, ಗೀತಾ ಕಣಿಯಾರು, ನೆಬಿಸಾ, ಅನ್ನತ್, ಧರಣಿ ಪಕೀರ, ಹೇಮಲತಾ, ಲಲಿತಾ, ಬೇಬಿ ಪೂಜಾರಿ, ಸೇತು ಮಾಧವನ್, ಲೀಲಾವತಿ ಸುವರ್ಣ, ಪದ್ಮನಾಭ ಬೊಳಿಕ್ಕಲ, ಅಶೋಕ್ ದೇರ್ಲ, ಸೇಸಪ್ಪ ದೇರ್ಲ, ಭಟ್ಯಪ್ಪ ರೈ ದೇರ್ಲ, ಚಂದ್ರಶೇಖರ ಇಳಂತಾಜೆ, ಲೀಲಾ ಬಿ.ಆರ್, ಮಮತಾ, ಶಾರದಾ ಮೊದಲಾದವರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top