ಕಡಬ: ಸಹಪ್ರಯಾಣಿಕನನ್ನು ರಕ್ಷಿಸಲು ಹೋಗಿ ಪ್ರಗತಿಪರ ಕೃಷಿಕರೋರ್ವರು ಜೀವ ಕಳೆದುಕೊಂಡ ಘಟನೆ ಕಡಬದಲ್ಲಿ ನಡೆದಿದ್ದು, ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಗತಿಪರ ಕೃಷಿಕ, ಕಳಾರ ಸಮೀಪದ ಕುದ್ಕೋಳಿ ನಿವಾಸಿ ಅಚ್ಯುತ ಗೌಡ (63) ಮೃತ ಪಟ್ಟವರು. ಬಲ್ಯ ನಿವಾಸಿ ಚಂದ್ರಶೇಖರ ಗಾಯಗೊಂಡವರು. ಅಚ್ಯುತ ಗೌಡರವರು ಸೊಸೈಟಿಗೆ ಹಾಲು ಕೊಡಲು ಬಂದವರು ವಾಪಸ್ಸು ಮನೆಗೆ ತೆರಳುವ ವೇಳೆ ದುರ್ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಅಪಘಾತ ನಡೆದ ಬಸ್ಸು, ಕಡಬದಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿತ್ತು. ಕಡಬ ಬಸ್ಸು ನಿಲ್ದಾಣದಿಂದ ತುಸು ದೂರದಲ್ಲಿರುವ ತಾಲೂಕು ಕಚೇರಿಯ ಸಮೀಪದ ತಿರುವಿನ ಬಳಿ ತಲುಪುತ್ತಲೇ ಅಚ್ಯುತ ಗೌಡ ಹಾಗೂ ಚಂದ್ರಶೇಖರ್ ಬಸ್ಸಿನಿಂದ ರಸ್ತೆಗೆಸೆಯಲ್ಪಟ್ಟಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಫುಟ್ ಬೂರ್ಡ್’ನಲ್ಲಿ ನಿಂತಿದ್ದ ಚಂದ್ರಶೇಖರ್ ಅವರು ಮೊದಲು ಆಯ ತಪ್ಪಿದ್ದು, ಅವರು ಉರುಳಿ ಬೀಳಬಾರದೆಂದು ಅಚ್ಯುತ ಗೌಡ ಅವರು ರಕ್ಷಿಸಲು ಹೋದಾಗ, ದುರ್ಘಟನೆ ಸಂಭವಿಸಿದೆ. ಇದರಿಂದ ಅಚ್ಯುತ ಗೌಡ ಗಂಭೀರ ಗಾಯಗೊಂಡಿದ್ದರು.
ಗಾಯಾಳುಗಳನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಅಲ್ಲಿ ಅಚ್ಯುತ ಗೌಡರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ 108 ಆಂಬ್ಯುಲೆನ್ಸ್ ಮೂಲಕ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಹಾದಿ ಮಧ್ಯೆ ಮೃತಪಟ್ಟಿದ್ದಾರೆ. ಮೃತರು ಪತ್ನಿ ಮೂವರ ಪುತ್ರಿಯರು ಹಾಗೂ ಮಗನನ್ನು ಅಗಲಿದ್ದಾರೆ.
ಚಂದ್ರಶೇಖರ ಎಂಬವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಕೆಎಸ್ಸ್ ಆರ್ ಟಿಸಿಯ ಉನ್ನತ ಅಧಿಕಾರಿಗಳು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ದುರ್ಘಟನೆಗೆ ಬಸ್ ನಿರ್ವಾಹಕ ಆನಂದ ನಾಯ್ಕ್ ಹಾಗೂ ಬಸ್ ಚಾಲಕ ಶಶಿಧರ್ ಯು.ಆರ್. ಬೇಜವಾಬ್ದಾರಿಯೇ ಕಾರಣ ಎಂದು ಆರೋಪಿಸಿ ಕಡಬ ನಿವಾಸಿ ಪ್ರಶಾಂತ್ ಕುಮಾರ್ ಕೆ. ಅವರು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.