ಪುತ್ತೂರು: ವಿದ್ಯಾರ್ಥಿ ಜೀವನದಲ್ಲಿ ಯಶಸ್ವಿಯಾಗಲು ದೈಹಿಕ ಮತ್ತು ಮಾನಸಿಕ ಆರೋಗ್ಯ ಅತ್ಯಗತ್ಯ. ಹದಿಹರೆಯದಲ್ಲಿ ಹುಡುಗ ಹುಡುಗಿಯರು ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಈ ಸಮಯದಲ್ಲಿ ವೈಜ್ಞಾನಿಕವಾಗಿ ದೇಹದಲ್ಲಿ ಕೆಲವೊಂದು ಸಹಜ ಬದಲಾವಣೆಗಳಾಗುತ್ತವೆ. ಹರೆಯದಲ್ಲಿ ಜವಾಬ್ದಾರಿ ಅರಿತು ನಡೆದರೆ ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂದು ಮಕ್ಕಳ ತಜ್ಞೆ, ಸೈಕೊಥೆರಪಿಸ್ಟ್ ಡಾ.ಸುಲೇಖಾ ಪಿ.ಎಂ. ಹೇಳಿದರು.
ನರೇಂದ್ರ ಪ.ಪೂ. ಕಾಲೇಜಿನ ವಿಜ್ಞಾನ ಸಂಘದ ವತಿಯಿಂದ ಆಯೋಜಿಸಲಾದ ಜೀವನಕ್ಕಾಗಿ ಅಧ್ಯಯನ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಾಲಕರು ತಮ್ಮ ಮಕ್ಕಳೊಂದಿಗೆ ಮಾತನಾಡಬೇಕು. ಏಕೆಂದರೆ ಹದಿಹರೆಯದವರು ಮತ್ತು ಹದಿಹರೆಯದವರಿಗೆ ಕುಟುಂಬದ ಬೆಂಬಲವು ಮುಖ್ಯವಾದ ಏಕೈಕ ವಿಷಯವಾಗಿದೆ. ಪೋಷಕರು ಅವರ ಮಾತನ್ನು ಯಾವುದೇ ನಿರ್ಣಯವಿಲ್ಲದೆ ಆಲಿಸಿದರೆ ಮತ್ತು ಅವರಿಗೆ ಸ್ವೀಕಾರ, ಪ್ರೀತಿ, ಗೌರವ ಮತ್ತು ಗುಣಮಟ್ಟದ ಸಮಯದ ಭಾವನಾತ್ಮಕ ಸಂಪನ್ಮೂಲಗಳನ್ನು ಒದಗಿಸಿದರೆ, ಮಕ್ಕಳು ಈ ಸಮಸ್ಯೆಗಳನ್ನು ಉತ್ತಮವಾಗಿ ನಿಭಾಯಿಸಬಹುದು ಎಂದು ಹೇಳಿದ ಅವರು, ಹದಿಹರೆಯದ ಸಮಯದಲ್ಲಿ ಎಲ್ಲರಲ್ಲೂ ವಿಭಿನ್ನ ಭಾವನೆಗಳು ಮೂಡುತ್ತವೆ. ಬಹಳಷ್ಟು ವಿಚಾರಗಳಲ್ಲಿ ನಿರ್ಧಾರ ಕೈಗೊಳ್ಳುವಾಗ ಗೊಂದಲಗಳು ಏರ್ಪಡುತ್ತವೆ. ಇಂತಹ ಸಮಯದಲ್ಲಿ ಪೋಷಕರೊಂದಿಗೆ, ಶಿಕ್ಷಕರೊಂದಿಗೆ ಅಥವಾ ಕುಟುಂಬದ ವೈದ್ಯರೊಂದಿಗೆ ಮುಕ್ತವಾಗಿ ಚರ್ಚಿಸಬೇಕು. ತಮ್ಮ ಜತೆ ಯಾರೇ ಅನುಚಿತವಾಗಿ ವರ್ತಿಸಿದರೂ ಧೈರ್ಯದಿಂದ ಪ್ರತಿಭಟಿಸುವ ಸಾಮರ್ಥ್ಯವನ್ನು ಹೆಣ್ಣುಮಕ್ಕಳು ಬೆಳೆಸಿಕೊಳ್ಳಬೇಕು. ಯುವಕರು ದುಶ್ಚಟಗಳಿಂದ ದೂರವಿರಬೇಕು. ನಿಯಮಿತ ವ್ಯಾಯಾಮಗಳಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸಬೇಕು ಎಂದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶ್ಯಾನುಭಾಗ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸಾಯಿಸಹನ ಸ್ವಾಗತಿಸಿ, ವಂದಿಸಿದರು.