ಕಾವು ಶ್ರೀ ಗಣೇಶೋತ್ಸವ ಸಮಿತಿಯಿಂದ 40ನೇ ವರ್ಷದ ಶ್ರೀ ಗಣೇಶೋತ್ಸವ | ಶೋಭಾಯಾತ್ರೆಗೆ ಮೆರುಗು ನೀಡಿದ ನೃತ್ಯ ಭಜನೆ, ಹುಲಿ ವೇಷ, ಗೊಂಬೆ ಕುಣಿತ

ಕಾವು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ 40ನೇ ವರ್ಷದ ಗಣೇಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

ಅರ್ಚಕ ವೇ. ಮೂ. ಶಿವಪ್ರಸಾದ್ ಕಡಮಣ್ಣಾ ಅವರ ಪೌರೋಹಿತ್ಯದಲ್ಲಿ ಶ್ರೀ ಗಣೇಶ ವಿಗ್ರಹ ಪ್ರತಿಷ್ಠಾಪನೆ, ಧಾರ್ಮಿಕ ಕಾರ್ಯಕ್ರಮ, ವಿಗ್ರಹ ಜಲಸ್ತಂಭನ ನಡೆಯಿತು.

ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ ಯೋಗ ಶಿಕ್ಷಣ ಸಂಯೋಜಕ ಚಂದ್ರಶೇಖರ ದೇಲಂಪಾಡಿ, ಗಣೇಶೋತ್ಸವವು ಧಾರ್ಮಿಕ ಪ್ರಜ್ಞೆ ಮೂಡಿಸುವ ಜೊತೆಗೆ ಹಿಂದೂ ಸಮಾಜವನ್ನು ಒಟ್ಟುಗೂಡುವುದಕ್ಕೆ ಸಹಕಾರಿ. ಆಧ್ಯಾತ್ಮಿಕ ಬದುಕು ನಡೆಸುವ ಮೂಲಕ ಹಿಂದೂ ಸಮಾಜದ ವಿಚಾರಗಳು ಜಗತ್ತಿಗೆ ಮಾರ್ಗದರ್ಶನವಾಗಬೇಕು ಎಂದರು.































 
 

ಮುಖ್ಯ ಅತಿಥಿಗಳಾಗಿ ಕಾವು ಶ್ರೀ ಪಂಚಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ, ಕಾವು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವ ಸಲಹೆಗಾರ ಚಂದ್ರಶೇಖರ ರಾವ್ ನಿಧಿಮುಂಡ ಭಗವಾಧ್ವಜಾರೋಹಣ ಮಾಡಿ, ಹಿಂದೂ ಧರ್ಮದ ಎಲ್ಲಾ ಹಬ್ಬಗಳ ಆಚರಣೆಗಳಲ್ಲಿ ಉದಾತ್ತವಾದ ಮೌಲ್ಯಗಳಿವೆ. ನೈಜವಾಗಿ ಆಚರಣೆಯಲ್ಲಿ ತೊಡಗಿದಾಗ ಮಾತ್ರ ದೇವರ ಅನುಗ್ರಹ ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾವು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ನನ್ಯ ಅಚ್ಚುತ ಮೂಡಿತ್ತಾಯ, ಕಾವು ಸಾರ್ವಜನಿಕ ಗಣೇಶೋತ್ಸವ ಸಮಿತಿಯು ಸುಮಾರು 40 ವರ್ಷಗಳಿಂದ ಗಣೇಶೋತ್ಸವವನ್ನು ವರ್ಷದಿಂದ ವರ್ಷಕ್ಕೆ ಭಕ್ತರ ಸಹಕಾರದಿಂದ ಬಹಳ ವಿಜೃಂಭಣೆಯಿಂದ ನಡೆಸುತ್ತಿದ್ದು, ಮುಂದೆಯೂ ಎಲ್ಲರ ಸಹಕಾರ ಅಗತ್ಯ ಎಂದರು.

ಸಮಿತಿ ನಿಕಟಪೂರ್ವ ಅಧ್ಯಕ್ಷ ಲೋಕೇಶ್ ಚಾಕೋಟೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸಮಿತಿ ಅಧ್ಯಕ್ಷ ನವೀನ್ ನನ್ಯ ಪಟ್ಟಾಜೆ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಕಾವು ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಕೃಷ್ಣ ಪ್ರಸಾದ್ ಕೊಚ್ಚಿ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಕಾವು ನನ್ಯ ತುಡರ್ ಭಜನಾ ಸಂಘ, ಮಾಣಿಯಡ್ಕ ದುರ್ಗಾವಾಹಿನಿ ಭಜನಾ ಮಂಡಳಿ, ಕಾವು ಗೆಳೆಯರ ಬಳಗ, ಅಮ್ಚಿನಡ್ಕ ಪಂಚಲಿಂಗೇಶ್ವರ ಭಜನಾ ಸಂಘ, ವಾಗ್ದೇವಿ ಮಾತೃ ಭಜನಾ ಸಂಘದ ವತಿಯಿಂದ ಭಜನಾ ಸೇವಾ ಕಾರ್ಯಕ್ರಮ ನಡೆಯಿತು.

ಶ್ರೀಕ್ರಷ್ಣ ಜನ್ಮಾಷ್ಟಮಿಯಂದು ಪುರುಷರು, ಮಹಿಳೆಯರು, ಪ್ರಾಥಮಿಕ ಹಂತ, ಪ್ರೌಢ ಹಂತ, ಪಿಯುಸಿ ವಿಭಾಗ ಹಾಗೂ ಅಂಗನವಾಡಿ ಪುಟಾಣಿಗಳಿಗೆ ಆಯೋಜಿಸಿದ ಕ್ರೀಡಾಕೂಟದ ಬಹುಮಾನ ವಿತರಣೆ ನಡೆಯಿತು. ಬಹುಮಾನದ ಪಟ್ಟಿಯನ್ನು ಸಮಿತಿ ಸದಸ್ಯ ದಿವ್ಯಪ್ರಸಾದ್ ಎ.ಎಂ. ವಾಚಿಸಿದರು. ಗಣೇಶೋತ್ಸವಕ್ಕೆ ಗಣೇಶ ವಿಗ್ರಹ ದಾನಿಗಳಾಗಿ ಸಹಕರಿಸಿದ ಹೆಚ್. ಶಿವಪ್ಪ ನಾಯ್ಕ ಸಸ್ಪೆಟ್ಟಿ ಅವರನ್ನು ಗೌರವಿಸಲಾಯಿತು.

ಸಂಜೆ 3.30 ಗಂಟೆಗೆ ಭಗವಾಧ್ವಜಾವರೋಹಣ ನಡೆಯಿತು. ಧ್ವಜಾವರೋಹಣವನ್ನು ಸಮಿತಿಯ ಗೌರವಾಧ್ಯಕ್ಷ ನನ್ಯ ಅಚ್ಚುತ ಮೂಡಿತ್ತಾಯ ನೆರವೇರಿಸಿದರು. ನಂತರ ಗಣೇಶ ವಿಗ್ರಹದ ಆಕರ್ಷಕ ಶೋಭಾಯಾತ್ರೆ ನಡೆಯಿತು.

ದುರ್ಗಾವಾಹಿನಿ ಭಜನಾ ಸಂಘದ ಸದಸ್ಯರಿಂದ ಮತ್ತು ತುಡರ್ ಮಕ್ಕಳ ಭಜನಾ ಸಂಘದಿಂದ ನೃತ್ಯ ಭಜನೆ, ಹುಲಿ ವೇಷ, ಗೊಂಬೆ ಕುಣಿತ ಶೋಭಾಯಾತ್ರೆಗೆ ಮೆರುಗು ನೀಡಿತು. ಶೋಭಾಯಾತ್ರೆಯು ಕಾವು ಪಂಚವಟಿ ನಗರ, ಕಾವು ಶಿವಪೇಟೆಯ ಮೂಲಕ ಸಾಗಿ ಆಮ್ಚಿನಡ್ಕ ಸೀರೆ ಹೊಳೆಯಲ್ಲಿ ಗಣೇಶ ವಿಗ್ರಹವನ್ನು ಜಲಸ್ಥಂಭನಗೊಳಿಸಲಾಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top