ಮುಕ್ಕೂರು: ಸಂಘಟಿತ ಸಮಾಜದ ನಿರ್ಮಾಣದ ಜತೆಗೆ ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಹಬ್ಬ ಹರಿದಿನಗಳು ಸಂದೇಶ ನೀಡುತ್ತಿದೆ. ಹಾಗಾಗಿ ವೈಯಕ್ತಿಕ ಹಿತಾಸಕ್ತಿಯನ್ನು ಬದಿಗಿರಿಸಿ ಸಮಾಜದ ಏಳಿಗೆಗೋಸ್ಕರ ನಾವೆಲ್ಲರೂ ಒಂದಾಗಿ ಕಾರ್ಯ ನಿರ್ವಹಿಸಬೇಕು ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಮುಕ್ಕೂರು- ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಮುಕ್ಕೂರು ಶಾಲಾ ವಠಾರದಲ್ಲಿ ಸೆ. 19ರಂದು ನಡೆದ 14ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಆಚರಣೆ, ಕ್ರೀಡಾಕೂಟ, ಸನ್ಮಾನ ಸಮಾರಂಭ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಮುಕ್ಕೂರು ಶಾಲೆ, ಪರಿಸರದ ಜತೆಗೆ ತನ್ನ ಒಡನಾಟ ಸ್ಮರಿಸಿದ ಶಾಸಕರು, ಮುಕ್ಕೂರಿನಗಣೇಶೋತ್ಸವವು ಹತ್ತಾರು ಸಮಾಜಮುಖಿ ಚಟುವಟಿಕೆಗಳ ಮೂಲಕ ಒಗ್ಗಟ್ಟಿನ ಸಮಾಜ ನಿರ್ಮಾಣದ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ ಎಂದರು.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಕೇವಲ ಹಣ, ಅಂತಸ್ತಿನಿಂದ ಸಾಧಕರಾಗಲು ಸಾಧ್ಯವಿಲ್ಲ. ಸಮಾಜ ಗೌರವಿಸುವ, ಹೆತ್ತವರನ್ನು ಪ್ರೀತಿಸುವ ವ್ಯಕ್ತಿತ್ವ ಇಲ್ಲದಿದ್ದರೆ ಯಾವ ಹಣ, ಅಂತಸ್ತುಗಳಿಂದ ಗೌರವ ದೊರೆಯಲಾರದು. ಹಾಗಾಗಿ ಹಬ್ಬದ ಸಾರ ಸಂದೇಶ ಅರಿತುಗೊಂಡು ಒಳ್ಳೆಯ ವ್ಯಕ್ತಿಯಾಗಿ ಬದುಕಿದರೆ ಸಮಾಜದಲ್ಲಿ ನಮಗೊಂದು ಗೌರವ ಸಿಗುತ್ತದೆ ಎಂದರು.
ಮುಕ್ಕೂರಿನಲ್ಲಿ ಗಣೇಶೋತ್ಸವ ಸಮಿತಿ ಹಬ್ಬದ ಆಚರಣೆಯ ಜತೆಗೆ ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಂಡಿರುವುದು ಪ್ರಶಂನೀಯ ಎಂದ ಶಾಸಕ ಅಶೋಕ್ ರೈ, ಸರಕಾರವು ಹತ್ತಾರು ಯೋಜನೆಗಳ ಮೂಲಕ ಬಡವರು ಸ್ವಾವಲಂಬನೆಯಿಂದ ಬದುಕಲು ಪ್ರೋತ್ಸಾಹ ನೀಡುತ್ತಿದೆ. ನಾನು ಪುತ್ತೂರು ಕ್ಷೇತ್ರದ ಶಾಸಕನಾಗಿದ್ದರೂ, ಸುಳ್ಯದ ಕ್ಷೇತ್ರದ ಜನರಿಗೆ ನನ್ನಿಂದ ಸಾಧ್ಯವಾದ ರೀತಿಯ ಎಲ್ಲ ಸಹಕಾರ ನೀಡಲು ಸಿದ್ಧನಿದ್ದೇನೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮುಕ್ಕೂರು ಸಾರ್ವಜನಿಕ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ, ಪೆರುವಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಸಾಮರಸ್ಯದ ಸಮಾಜದ ಸ್ಥಾಪನೆಯೇ ಮುಕ್ಕೂರು ಗಣೇಶೋತ್ಸವದ ಮುಖ್ಯ ಆಶಯ. ಹಾಗಾಗಿ ಜಾತಿ, ಮತ, ಪಕ್ಷದ ಬೇಧಭಾವ ಇಲ್ಲದೆ ಸರ್ವರ ಹಿತಕ್ಕೆ ಪೂರಕವಾದ ಕಾರ್ಯಕ್ರಮ ಆಯೋಜಿಸುತ್ತಿದ್ದು ಈ ಊರಿನ ಜನರು ಇದಕ್ಕೆ ಅಭೂತಪೂರ್ವ ಬೆಂಬಲ ನೀಡುತ್ತಿದ್ದಾರೆ ಎಂದರು.
ಸಾಫ್ಟ್ ವೇರ್ ಎಂಜಿನಿಯರ್ ನರಸಿಂಹ ತೇಜಸ್ವಿ, ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ, ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ, ಮುಕ್ಕೂರು ಸರಕಾರಿ ಹಿ.ಪ್ರಾ. ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಜಯಂತ ಕುಂಡಡ್ಕ ಶುಭ ಹಾರೈಸಿದರು.
ಇಬ್ಬರು ಸಾಧಕರಿಗೆ ಸನ್ಮಾನ :
ಈ ಸಂದರ್ಭದಲ್ಲಿ ಸಾಹಿತಿ ಗೋಪಾಲಕೃಷ್ಣ ಭಟ್ ಮನವಳಿಕೆ, ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಸಿಬಂದಿ ಜತ್ತಪ್ಪ ಕೆ. ಅವರನ್ನು ಸನ್ಮಾನಿಸಲಾಯಿತು. ಸಾಹಿತಿ ಅಶ್ವಿನಿ ಕೋಡಿಬೈಲು ಅವರು ಅಭಿನಂದನಾ ಮಾತುಗಳನ್ನಾಡಿದರು
ಪ್ರತಿಭಾ ಪುರಸ್ಕಾರ:
ಸಮಾರಂಭದಲ್ಲಿ ಎಸ್ಎಸ್ಎಲ್ಸಿಯಲ್ಲಿ ಗರಿಷ್ಠ ಅಂಕ ಪಡೆದ 10 ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರಧಾನ ಮಾಡಲಾಯಿತು. ಶಾಸಕಿ ಭಾಗೀರಥಿ ಮುರುಳ್ಯ, ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಊರವರ ಪರವಾಗಿ ಗೌರವಿಸಲಾಯಿತು. ಪೆರುವಾಜೆ ಗ್ರಾ.ಪಂ.ನ ಅಧ್ಯಕ್ಷರಾಗಿ ಎರಡನೆ ಅವಧಿಗೆ ಆಯ್ಕೆಗೊಂಡ ಜಗನ್ನಾಥ ಪೂಜಾರಿ ಮುಕ್ಕೂರು ಅವರನ್ನು ಗಣೇಶೋತ್ಸವ ಸಮಿತಿ ವತಿಯಿಂದ ಸಮ್ಮಾನಿಸಲಾಯಿತು. ಒಂದು ತಾಸು ಕುಣಿತ ಭಜನೆ ಮಾಡಿದ ಪೆರುವಾಜೆ ಶ್ರೀ ಜಲದುರ್ಗಾ ಕುಣಿತ ಭಜನ ತಂಡವನ್ನು, ಕಾರ್ಯಕ್ರಮದ ವಿವಿಧ ವಿಭಾಗದಲ್ಲಿ ಸ್ವಯಂಸೇವಕರಾಗಿ ದುಡಿದ ಬೆಳ್ಳಾರೆ ಜ್ಞಾನದೀಪ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಮುಕ್ಕೂರು-ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ರವಿ ಕುಂಡಡ್ಕ ಉಪಸ್ಥಿತರಿದ್ದರು. ಬೆಳ್ಳಾರೆ ಜ್ಞಾನದೀಪ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ನೇಸರ ಯುವಕ ಮಂಡಲ ಅಧ್ಯಕ್ಷ ರಮೇಶ್ ಕಾನಾವು ವಂದಿಸಿದರು. ಪತ್ರಕರ್ತೆ ಬೃಂದಾ ಪೂಜಾರಿ ಮುಕ್ಕೂರು ಕಾರ್ಯಕ್ರಮ ನಿರೂಪಿಸಿದರು.