ಪುತ್ತೂರು: ಬಂಟ್ವಾಳ ತಾಲೂಕಿನ ಕೆಲಿಂಜ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 47ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಶ್ರೀ ನಿಕೇತನ ಮಂದಿರದಲ್ಲಿ ಮಂಗಳವಾರ ಸಂಭ್ರಮದಿಂದ ನಡೆಯಿತು.
ಉತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪುತ್ತೂರು ತಾಲೂಕು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ರಾಮ್ ದಾಸ್ ಶೆಟ್ಟಿ ಮಾತನಾಡಿ, ಸ್ಥಳೀಯ ಸಂಘಟಕರು ಧಾರ್ಮಿಕವಾಗಿ ಉತ್ತಮ ಕಾರ್ಯಕ್ರಮ ಸಂಘಟಿಸಿದ್ದಾರೆ. ಈ ರೀತಿಯ ಸಮಿತಿ ಮೂಲಕ ನಡೆಯುವ ಕಾರ್ಯಕ್ರಮ ಊರಿನ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಪುತ್ತೂರು ಪ್ರೇರಣಾ ಉನ್ನತ ಶಿಕ್ಷಣ ತರಬೇತಿ ಕೇಂದ್ರದ ನಿರ್ದೇಶಕರಾದ ವಸಂತ ವೀರಮಂಗಲ ಮಾತನಾಡಿ, ಗಣೇಶೋತ್ಸವ ಆಚರಣೆ ಮೂಲಕ ಗಣಪತಿ ದೇವರ ಬದುಕಿನ ಆದರ್ಶಗಳು ಜನರಿಗೆ ಶೀಘ್ರ ತಲುಪುತ್ತದೆ. ಮುಖ್ಯವಾಗಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ, ಸನ್ಮಾನ ಮಾಡಿರುವುದು ಶ್ಲಾಘನೀಯ. ನಾನು ಪ್ರೇರಣಾ ಸಂಸ್ಥೆಯಲ್ಲಿ ಕರಿಯರ್ ಗೈಡೆನ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು ಈ ರೀತಿಯ ಕಾರ್ಯಕ್ರಮಗಳಿಗೆ ಮಾರ್ಗದರ್ಶನ ನೀಡಲು ಸದಾ ಸಿದ್ಧ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲರಾದ ಸೀತಾರಾಮ ಕೇವಳ ಮಾತನಾಡಿ, ಸಮಿತಿ ಮೂಲಕ ನಡೆಯುವ ಶ್ರೀ ಗಣೇಶೋತ್ಸವ ಆಚರಣೆಯು ಸರ್ವತೋಮುಖ ಬೆಳವಣಿಗೆಗೆ ಆಸ್ಪದ ನೀಡುತ್ತದೆ. ಅಲ್ಲದೆ ಉತ್ತಮ ಅಂಕ ಪಡೆದವರನ್ನು ಸನ್ಮಾನಿಸುವುದರ ಜತೆಗೆ ಪ್ರತಿಭಾ ಪುರಸ್ಕಾರ ನೀಡಲಾಗಿದೆ. ಆಟೋಟ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಗಿದೆ. ಎಲ್ಲರನ್ನೂ ಒಳಗೊಳ್ಳುವ ಕಾರ್ಯಕ್ರಮವಾಗಿ ಮೂಡಿ ಬಂದಿದೆ ಎಂದರು. ಗಣಪತಿಯ ಬದುಕನ್ನು ಗಮನಿಸಿದಾಗ ತಂದೆ-ತಾಯಿಯರನ್ನು ಗೌರವಿಸಿದರೆ ಸಂಸ್ಕೃತಿ ಉಳಿಯುತ್ತದೆ ಎಂಬುದು ವೇದ್ಯವಾಗುತ್ತದೆ ಎಂದು ಹೇಳಿ ಈ ನಿಟ್ಟಿನಲ್ಲಿ ಗಣಪತಿಯ ಉತ್ಸವಾಚರಣೆ ಮಾಡಿದರೆ ಸಾಲದು ಬದಲಾಗಿ ಗಣಪತಿಯ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಆಚರಣೆಗೆ ತಂದರೆ ಗಣೇಶೋತ್ಸವಕ್ಕೆ ಅರ್ಥ ಬದುತ್ತದೆ ಎಂದರು. ಪ್ರಶಾಂತ ವಾತಾವರಣದಲ್ಲಿ ನಡೆದ ಕಾರ್ಯಕ್ರಮದ ಸಂಘಟಕರಿಗೆ ಕೃತಜ್ಷತೆ ಸಲ್ಲಿಸಿದರು.
ವೇದಿಕೆಯಲ್ಲಿ ಶ್ರೀ ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷ ದೇವದಾಸ ರೈ ಮಾಡದಾರು, ಅಧ್ಯಕ್ಷ ಸಂದೀಪ್ ಪೂಜಾರಿ ಪೆಲ್ತಡ್ಕ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಗರಿಷ್ಠ ಅಂಕಗಳನ್ನು ಪಡೆದ ಐದು ಮಂದಿಗೆ ಸನ್ಮಾನ ಹಾಗೂ ಪ್ರತಿಭಾ ಕಾರಂಜಿಯಲ್ಲಿ ಸಾಧನೆಗೈದ ಎರಡು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ 40ಕ್ಕೂ ಹೆಚ್ಚು ಜನರಿಗೆ ಬಹುಮಾನ ನೀಡಲಾಯಿತು. ಲಯನ್ಸ್ ಸಂತೋಷ್ ಕುಮಾರ್ ಪೆಲ್ತಡ್ಕ ಸ್ವಾಗತಿಸಿದರು. ಜಗದೀಶ್ ರೈ ನಡುವಳಚಿಲ್ ವಂದಿಸಿದರು. ಉದಯ್ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು.
ಬೆಳಿಗ್ಗೆ ಪ್ರಗತಿಪರ ಕೃಷಿಕ ಸತ್ಯಸುಂದರ ಭಟ್ ಕಲ್ಮಲೆ ದೀಪ ಪ್ರಜ್ವಲನೆ ಮೂಲಕ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಶ್ರೀ ಕ್ಷೇತ್ರ ಕೆಲಿಂಜದ ಪ್ರಧಾನ ಅರ್ಚಕ ಮಹೇಶ್ ಭಟ್ ಮೂರ್ತಿ ಪ್ರತಿಷ್ಠೆ ಮಾಡಿದರು. ಮಧ್ಯಾಹ್ನ ಮಹಾಪೂಜೆ ಬಳಿಕ ಪ್ರಸಾದ ಭೋಜನ ವಿತರಣೆ ನಡೆಯಿತು.