ಧಾರ್ಮಿಕತೆಯ ಗಣೇಶೋತ್ಸವಕ್ಕೆ ಸಾಮಾಜಿಕ ಮಹತ್ವವೂ ಇದೆ

“ವಕ್ರ ತುಂಡ ಮಹಾಕಾಯ ಸೂರ್ಯ ಕೋಟಿ ಸಮಪ್ರಭl ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೇಶು ಸರ್ವದಾl”

ಹೀಗೆಂದು ಪ್ರಾರ್ಥಿಸುತ್ತಾ ಪ್ರತೀ ವರುಷ ದೇಶವಿಡೀ ಗಣೇಶ ಚತುರ್ಥಿಯನ್ನು ವಿಜ್ರಂಭಣೆಯಿಂದ ಆಚರಿಸುತ್ತೇವೆ. ಪೌರಾಣಿಕ, ಧಾರ್ಮಿಕ ಹಾಗೂ ಸಾಮಜಿಕ ಹಿನ್ನೆಲೆಯುಳ್ಳ ಈ ಹಬ್ಬವನ್ನು ಪ್ರತೀ ವರುಷ  ಭಾದ್ರಪದ  ಮಾಸದ ಶುಕ್ಲ ಪಕ್ಷದ ಚೌತಿಯ ದಿನದಂದು ನಡೆಸುತ್ತೇವೆ.

ಕೆಲವೆಡೆ ಗೌರಿ ಗಣೇಶ ಹಬ್ಬ ಎಂದೇ ಕರೆಯಲಾಗುವ ಈ ಹಬ್ಬದಲ್ಲಿ ಮುತ್ತೈದೆಯರಿಗೆ ತವರು ಮನೆಯಿಂದ ಬಾಗಿನ ಕೊಡುವ ಸಂಪ್ರದಾಯವೂ ಇದೆ.































 
 

ಮನೆ ಮನೆಗಳಲ್ಲಿ, ದೇವಸ್ಥಾನಗಳಲ್ಲಿ, ಶಾಲೆಗಳಲ್ಲಿ, ವಿಶಾಲ ಮೈದಾನಗಳಲ್ಲಿ, ಚಿಕ್ಕ ಚಿಕ್ಕ ಗಲ್ಲಿಗಳಲ್ಲಿ, ಎಲ್ಲೆಲ್ಲಿ ಜನರಿಗೆ ಸಂಭ್ರಮಿಸಲು ಅನುಕೂಲ ಅನ್ನಿಸುವುದೋ ಅಲ್ಲೆಲ್ಲಾ ಗಣೇಶ ಹಬ್ಬ.

ಇಲ್ಲಿ ಯವುದೇ ವಯಸ್ಸಿನ ಮಿತಿಯಿಲ್ಲ. ಜಾತಿಯ ಅಂತರವಿಲ್ಲ. ಬಡವ ಧನಿಕನೆಂಬ ಭೇದ ಭಾವವಿಲ್ಲ. ಎಲ್ಲರೂ ಒಂದು ನಿಶ್ಚಿತವಾದ ಸಂದರ್ಭದಲ್ಲಿ ಒಟ್ಟು ಸೇರಿ ದೇವರ ಮುಂದೆ ಬಾಗಿ ನಿಲ್ಲುವ ಆ ಸಮರ್ಪಣಾ ಮನೋಭಾವಕ್ಕೆ ಅದ್ಭುತ ಅವಕಾಶ.

ತಮಗೆಲ್ಲರಿಗೂ ಗೊತ್ತಿರುವ ಹಾಗೆ ಈ ಹಬ್ಬಕ್ಕೆ ಮಹತ್ವವಾದ ಸಾಮಾಜಿಕ ಹಿನ್ನಲೆಯೂ ಇದೆ. ನಮ್ಮ ದೇಶದ ಸ್ವಾತಂತ್ರ್ಯದ ಪೂರ್ವದಲ್ಲಿ ಮನೆ ಮನೆಗಳಲ್ಲಿ ಗಣೇಶ ಹಬ್ಬ ಆಚರಣೆಯಲ್ಲಿತ್ತು.

ಭಕ್ತಿ, ಭಾವ ಹಾಗೂ ಹಬ್ಬ ಮನೆಗೆ ಮಾತ್ರ ಸೀಮಿತವಾಗುವ ಬದಲು ದೇಶದ ವರೆಗೆ ವಿಸ್ತಾರವಾಗಲೆಂದುಕೊಂಡು “ಲೋಕಮಾನ್ಯ ಬಾಲಗಂಗಾಧರ ತಿಲಕ್” ರವರು ಸಾರ್ವಜನಿಕ ಗಣೇಶೋತ್ಸವವನ್ನು ಜಾರಿಗೆ ತಂದರು. ಮುಖ್ಯವಾಗಿ  ಸ್ವಾತಂತ್ರ್ಯ  ಹೋರಾಟದ ಕಿಡಿಯನ್ನು  ಈ ಹಬ್ಬದ ಹೂರಣವಾಗಿಟ್ಟುಬಿಟ್ಟಿದ್ದರು. ಅದೇ ಕಿಡಿ ಭಾರತೀಯರಲ್ಲಿ ಕಿಚ್ಚಾಗಿ ಪರಿಣಮಿಸಿ ಸ್ವಾತಂತ್ರ್ಯಕ್ಕಾಗಿ ಚಳುವಳಿಯನ್ನು ನಡೆಸಲು ಪ್ರೇರೇಪಿಸಿತು.

ಈ ಹಬ್ಬದಂದು ಗಣೇಶ ಮನೆ ಮನೆ ಬರುತ್ತಾನೆ. ಕಡುಬು, ಕಜ್ಜಾಯ ತಿನ್ನುತ್ತಾನೆ. ನಂಬಿದವರನ್ನು ಸಲಹುತ್ತಾನೆ ಎಂಬ ಮಾತಿದೆ. ಅದೇ ರೀತಿ ಚೌತಿಯಂದು ಚಂದಿರನ ನೋಡಿದರೆ ಅಪವಾದ ಬರುವುದು ಎಂಬುದನ್ನೂ ನಾವು ಕೇಳಿದ್ದೇವೆ.

ಗಣೇಶ ಪ್ರತಿಷ್ಠಾಪನೆಯಿಂದ ಮೊದಲ್ಗೊಂಡು ವಿಸರ್ಜನೆಯವರೆಗೆ ಹಲವಾರು  ಸಾಂಪ್ರದಾಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಾಗುವ ಹಬ್ಬದಲ್ಲಿ ಜನಸಾಗರದ ಸೊಬಗೇ ಅದ್ಭುತ. ಜೊತೆಗೆ ಹೂವುಗಳ ರಾಶಿಯ ನಡುವಿನಲ್ಲಿ  ಎತ್ತರಕ್ಕೆ ರಾರಾಜಿಸುವ ಸೌಮ್ಯ ಸ್ವರೂಪಿ, ವಿಘ್ನವಿನಾಶಕನ ಮಣ್ಣಿನ ವಿಗ್ರಹ.. ಇದಕ್ಕಿಂತ ಕಣ್ಮನ ಸೆಳೆಯುವ ಹಬ್ಬವಿರಬಹುದೆ?

ಒಟ್ಟಿನಲ್ಲಿ ಗಣೇಶ ಚತುರ್ಥಿಯ ಸಂಭ್ರಮದಿಂದ ಪರಸ್ಪರ ಪ್ರೀತಿ, ಸ್ನೇಹ ಹೆಚ್ಚಲಿ, ಎಲ್ಲೆಡೆ  ಸುಖ ಶಾಂತಿ ನೆಮ್ಮದಿಯನ್ನು ಪಸರಿಸಲಿ ಎಂದು ಆಶಿಸೋಣ.

“ಲೋಕಾ ಸಮಸ್ತಾ ಸುಖಿನೋಭವಂತು”

ಡಾ. ಶರ್ಮಿಳಾ ನಟರಾಜ್, ಬೆಂಗಳೂರು

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top