ಪ್ಲಾಸ್ಟಿಕ್ ಬಾಟಲ್, ಲೋಟ ನಿಷೇಧಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರಕಾರದ ಮಹತ್ವದ ಆದೇಶ!

ಬೆಂಗಳೂರುಸರ್ಕಾರದ ಅಧಿಕೃತ ಸಭೆ, ಸಮಾರಂಭ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಮತ್ತು ಲೋಟಗಳನ್ನು ನಿಷೇಧ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

 2018ರಲ್ಲಿ ಮಾಡಿದ್ದ ಆದೇಶ ಪಾಲನೆ ಮಾಡದ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಂದ ಈ ಆದೇಶ ಹೊರಬಿದ್ದಿದೆ.

ಪ್ರಸ್ತಾವನೆಯಲ್ಲಿ ವಿವರಿಸಲಾಗಿರುವ ಅಂಶಗಳ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ಮಂಡಳಿ, ನಿಗಮ, ವಿಶ್ವವಿದ್ಯಾನಿಲಯಗಳು ಮತ್ತು ಸರ್ಕಾರದಿಂದ ಅನುದಾನ ಪಡೆಯುವಂತಹ ಯಾವುದೇ ಸಂಸ್ಥೆಗಳ ವತಿಯಿಂದ ಏರ್ಪಡಿಸಲ್ಪಡುವ ಸಭೆ-ಸಮಾರಂಭಗಳಲ್ಲಿ ಏಕಬಳಕೆಯ ಪ್ಲಾಸ್ಟಿಕ್ ಬಾಟಲ್‌ನ ನೀರಿನ ಬಳಕೆ / ಸರಬರಾಜು ಮಾಡುವುದನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ.































 
 

ಇಂತಹ ಸಭೆ-ಸಮಾರಂಭಗಳಲ್ಲಿ ಕುಡಿಯುವ ನೀರನ್ನು ಸಂದರ್ಭಾನುಸಾರ ಶುಚಿತ್ವ ರೀತಿಯಲ್ಲಿ ಗ್ಲಾಸ್, ಸ್ಟೀಲ್, ಪೇಪರ್ ಮತ್ತಿತರ ಪ್ಲಾಸ್ಟಿಕ್ ಅಲ್ಲದ ಲೋಟಗಳಲ್ಲಿ ಸರಬರಾಜು ಮಾಡಲು ಕ್ರಮ ವಹಿಸಬೇಕು. ಜತೆಗೆ ಸಾಮೂಹಿಕ ಕುಡಿಯುವ ನೀರು ವಿತರಣಾ ವ್ಯವಸ್ಥೆಯನ್ನು ಮಾಡಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ನೀರಿನ ಬಳಕೆ ಬಗ್ಗೆ ಇರುವ ಸೂಚನೆ ಏನು?

ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ಮಂಡಳಿ, ನಿಗಮ, ವಿಶ್ವವಿದ್ಯಾಲಯಗಳು ಹಾಗೂ ಸರ್ಕಾರದಿಂದ ಅನುದಾನ ಪಡೆಯುವಂತಹ ಸಂಸ್ಥೆಗಳ ವತಿಯಿಂದ ಏರ್ಪಡಿಸಲ್ಪಡುವ ಸಭೆಸಮಾರಂಭ, ಕಾರ್ಯಾಗಾರ, ಸೆಮಿನಾರ್, ಇತ್ಯಾದಿಗಳಲ್ಲಿ 20 ಲೀಟರ್ ಅಥವಾ ಅದಕ್ಕೂ ಹೆಚ್ಚಿನ ಸಾಮರ್ಥ್ಯದ ಕ್ಯಾನ್ಗಳಲ್ಲಿ ಶುದ್ಧೀಕರಿಸಿದ ಕುಡಿಯುವ ನೀರಿನ ವಿತರಣಾ ವ್ಯವಸ್ಥೆಯನ್ನು ಮಾಡಬೇಕು.

ಕಚೇರಿಗಳಲ್ಲಿ ಸಾಮಾನ್ಯವಾಗಿ ಆಗಾಗ ಸಭೆ – ಸಮಾರಂಭಗಳು ಏರ್ಪಡುವ ಸಮಿತಿ ಕೊಠಡಿಗಳು, ಇತ್ಯಾದಿ ಸಭಾಂಗಣಗಳಲ್ಲಿ ಕೇಂದ್ರ ಸರ್ಕಾರದ ಜಾಲತಾಣದಲ್ಲಿ ಅನುಮೋದಿಸಲ್ಪಟ್ಟಿರುವ ಅಥವಾ ರಾಜ್ಯ ಸರ್ಕಾರದಿಂದ ಅಂಗೀಕರಿಸಲ್ಪಟ್ಟಿರುವ ಸಂಸ್ಥೆಗಳಿಂದ ಖರೀದಿಸಿದ ಆರ್‌ಒ ಮತ್ತು ನೀರು ಶುದ್ಧೀಕರಣ ಘಟಕಗಳನ್ನು ಅನುಸ್ಥಾಪಿಸಿ, ಗಾಜಿನ ಲೋಟ ಅಥವಾ ಸ್ಟೀಲ್ ಲೋಟ ಇಲ್ಲವೇ ಪೇಪರ್ ಲೋಟ ಇಲ್ಲವೇ ಇತರೆ ಪ್ಲಾಸ್ಟಿಕ್ ಅಲ್ಲದ ಲೋಟಗಳಲ್ಲಿ ನೀರು ಕುಡಿಯುವುದಕ್ಕೆ ವ್ಯವಸ್ಥೆ ಮಾಡಬೇಕು.

ಎಲ್ಲ ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ಮಂಡಳಿ, ನಿಗಮ, ವಿಶ್ವವಿದ್ಯಾನಿಲಯಗಳು ಹಾಗೂ ಸರ್ಕಾರದಿಂದ ಅನುದಾನ ಪಡೆಯುವಂತಹ ಸಂಸ್ಥೆಗಳ ಕಚೇರಿಗಳಲ್ಲಿ ಸಾರ್ವಜನಿಕರಿಗಾಗಿ ಶುದ್ಧ ಕುಡಿಯುವ ನೀರು ಸರಬರಾಜಿಗಾಗಿ ಕೇಂದ್ರ ಸರ್ಕಾರದ ಜಾಲತಾಣದಲ್ಲಿ ಅನುಮೋದಿಸಲ್ಪಟ್ಟಿರುವ ಸಂಸ್ಥೆಗಳಿಂದ ಖರೀದಿಸಿದ ಅಥವಾ ಯಾವುದಾದರೂ ಉತ್ತಮ ಶುದ್ಧ ನೀರಿನ ಘಟಕಗಳನ್ನು ವ್ಯವಸ್ಥಾಪನೆಗೊಳಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top