ದೆಹಲಿ: ಇಂದು ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನದ ಎರಡನೇ ದಿನವಾಗಿದೆ. ಇಂದಿನಿಂದ ಹಳೆ ಸಂಸತ್ ಭವನದಲ್ಲಿ ಕಲಾಪಕ್ಕೆ ವಿದಾಯ ಹೇಳುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಈ ವೇಳೆ ಹಳೆಯ ಸಂಸತ್ ಭವನದ ಬಗ್ಗೆ ಹಲವಾರು ವಿಷಯಗಳನ್ನು ಹಂಚಿಕೊಂಡರು.
ಹಳೆ ಸಂಸತ್ ಭವನದ ತಮ್ಮ ಕೊನೆ ಭಾಷಣದಲ್ಲಿ ಮಾತನಾಡಿದ ಅವರು, ‘ನಾವು ಹೊಸ ಭವಿಷ್ಯವನ್ನು ಆರಂಭಿಸಲಿದ್ದೇವೆ. ಹೊಸ ಸಂಸತ್ ಭವನದತ್ತ ಹೆಜ್ಜೆ ಇಡುತ್ತಿದ್ದೇವೆ. ಸೆಂಟ್ರಲ್‌ಹಾಲ್ ನಮ್ಮ ಭಾವನೆಗಳಿಂದ ತುಂಬಿದೆ. ಹಳೆ ಸಂಸತ್ ಭವನದಲ್ಲಿ 4000ಕ್ಕೂ ಹೆಚ್ಚು ಕಾನೂನು ಜಾರಿಗೆ ತಂದಿದ್ದೇವೆ. ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದೇವೆ. ಇದೇ ಸಂಸತ್ ಭವನದಲ್ಲಿ ಮುಸ್ಲಿಂ ಮಹಿಳೆಯರಿಗೆ ನ್ಯಾಯವನ್ನು ನೀಡಿದ್ದೇವೆ. ತ್ರಿವಳಿ ತಲಾಕ್ ರದ್ದುಗೊಳಿಸಿದ್ದೇವೆ’ ಎಂದು ಮೋದಿ ನೆನೆದರು.
ಇದೇ ವೇಳೆ ಹಳೆ ಸಂಸತ್ ಭವನ ನಮ್ಮ ಮನೆಯಂತೆ ಎಂದು ಮೋದಿ ಹೇಳಿದರು. ‘ಈ ಕಟ್ಟಡ ಮತ್ತು ಈ ಸೆಂಟ್ರಲ್ ಹಾಲ್ ಕೂಡ ಒಂದು ರೀತಿಯಲ್ಲಿ ನಮ್ಮ ಮನೆಯಂತೆ. ಇದು ನಮ್ಮನ್ನು ಭಾವುಕರನ್ನಾಗಿಸುತ್ತದೆ ಮತ್ತು ಕರ್ತವ್ಯಕ್ಕೆ ಪ್ರೇರೇಪಿಸುತ್ತದೆ. ಸ್ವಾತಂತ್ರ್ಯದ ಮೊದಲು ಇದನ್ನು ಗ್ರಂಥಾಲಯವಾಗಿ ಬಳಸಲಾಗುತ್ತಿತ್ತು. ಸ್ವಾತಂತ್ರ್ಯಾನಂತರ ಇಲ್ಲಿಯೇ ಸಂವಿಧಾನ ರಚನಾ ಸಭೆಗಳು ನಡೆದವು ಮತ್ತು ಸಂವಿಧಾನ ಸಭೆಯ ಮೂಲಕ ತೀವ್ರ ಚರ್ಚೆಗಳ ನಂತರ ನಮ್ಮ ಸಂವಿಧಾನವು ಇಲ್ಲಿ ರೂಪುಗೊಂಡಿತು. 1947ರಲ್ಲಿ ಬ್ರಿಟಿಷ್ ಸರ್ಕಾರ ಇಲ್ಲಿಗೆ ಅಧಿಕಾರವನ್ನು ಹಸ್ತಾಂತರಿಸಿತು. ಆ ಪ್ರಕ್ರಿಯೆಗೆ ಈ ಸೆಂಟ್ರಲ್ ಹಾಲ್ ಸಾಕ್ಷಿಯಾಗಿದೆ. ಈ ಕೇಂದ್ರ ಸಭಾಂಗಣದಲ್ಲಿ ನಮ್ಮ ತ್ರಿವರ್ಣ ಧ್ವಜ ಮತ್ತು ರಾಷ್ಟ್ರಗೀತೆಯನ್ನು ಅಳವಡಿಸಿಕೊಳ್ಳಲಾಯಿತು’ ಎಂದು ಅವರು ನೆನೆದರು.
ನಾವೆಲ್ಲರೂ ಒಟ್ಟಾಗಿ ಹೊಸ ಸಂಸತ್ ಭವನದಲ್ಲಿ ಗಣೇಶ ಚತುರ್ಥಿ ಆಚರಿಸೋಣ:
‘ಇಂದು ಹೊಸ ಸಂಸತ್ ಭವನದಲ್ಲಿ ನಾವೆಲ್ಲರೂ ಒಟ್ಟಾಗಿ ಹೊಸ ಭವಿಷ್ಯಕ್ಕಾಗಿ ಗಣೇಶ ಚತುರ್ಥಿಯನ್ನು ಆಚರಿಸೋಣ. ಇಂದು ನಾವು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಪುನರುಚ್ಚರಿಸುವ ಉದ್ದೇಶದಿಂದ ಇಲ್ಲಿಂದ ಹೊಸ ಕಟ್ಟಡದತ್ತ ಸಾಗುತ್ತಿದ್ದೇವೆ. ದೃಢಸಂಕಲ್ಪದೊಂದಿಗೆ ಅದನ್ನು ಪೂರೈಸಲು ಪೂರ್ಣ ಹೃದಯದಿಂದ ಕೆಲಸ ಮಾಡೋಣ’ ಎಂದು ಹೇಳಿದರು.
‘ಸಂವಿಧಾನವನ್ನು ಇದೇ ಸಂಸತ್ ಭವನದಲ್ಲಿ ಅನುಷ್ಠಾನಗೊಳಿಸಲಾಯಿತು. ಮುಂದಿನ ದಿನಗಳಲ್ಲಿ ಹಳೇ ಕಾನೂನುಗಳಿಂದ ಮುಕ್ತಿ ಪಡೆದು ಹೊಸ ಕಾನೂನುಗಳನ್ನು ಜಾರಿಗೆ ತರಬೇಕಿದೆ. ಅರ್ಥವ್ಯವಸ್ಥೆಯಲ್ಲಿ ಭಾರತ ಶೀಘ್ರವೇ ಮೂರನೇ ಸ್ಥಾನದಲ್ಲಿ ಬರಲಿದೆ. ಭಾರತದಲ್ಲಿನ ವೇಗದ ಅಭಿವೃದ್ಧಿ ವಿಶ್ವವೇ ಬೆರಗುಗಣ್ಣಿನಿಂದ ನೋಡುತ್ತಿದೆ’ ಎಂದರು.
ಬಳಿಕ ಅವರು ಈ ಕಟ್ಟಡವನ್ನು ಈಗ ‘ಸಂವಿಧಾನ ಸದನ’ ಎಂದು ಕರೆಯಬೇಕು ಎಂದು ಸಲಹೆ ನೀಡಿದರು. ಬಳಿಕ ಹಳೆ ಸಂಸತ್ ಕಟ್ಟಡದ ಸೆಂಟ್ರಲ್ ಹಾಲ್‌ನಿಂದ ಇತರರೊಂದಿಗೆ ಹೊರಟರು.