ಬೆಂಗಳೂರು: ಚುನಾವಣೆ ಟಿಕೆಟ್ ಕೊಡಿಸುವುದಾಗಿ ಕೋಟ್ಯಾಂತರ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಮೂರನೇ ಆರೋಪಿ ಅಭಿನವ ಹಾಲಶ್ರೀಯನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಒಡಿಶಾದ ಕಟಕ್ ಬಳಿ ರೈಲಿನಲ್ಲಿ ಭುವನೇಶ್ವರದಿಂದ ಬೋಧಯಾಗೆ ತೆರಳುತ್ತಿದ್ದ ವೇಳೆ ಹಾಲಶ್ರೀಯನ್ನು ಇಂದು ಮುಂಜಾನೆ ಬಂಧಿಸಿ ಬೆಂಗಳೂರಿಗೆ ಕರೆತರಲಾಗಿದೆ.
ಈಗಾಗಲೇ ಪ್ರಕರಣ ಮುಖ್ಯ ಆರೋಪಿಗಳಾದ ಚೈತ್ರಾ ಕುಂದಾಪುರ ಹಾಗೂ ಗಗನ್ ಕಡೂರು ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಮೂರನೇ ಆರೋಪಿ ವಿಜಯನಗರ ಜಿಲ್ಲೆಯ ಅಭಿನವ ಹಾಲಶ್ರೀ ಬಂಧನಕ್ಕೆ ಸಿಸಿಬಿ ಬಲೆ ಬೀಸಿತ್ತು. ಆದರೆ ಹಾಲಶ್ರೀ ಮಠದಿಂದ ಪರಾರಿಯಾಗಿ ತಲೆಮರೆಸಿಕೊಂಡಿದ್ದರು. ಈ ನಡುವೆ ಸ್ವಾಮೀಜಿಯನ್ನು ಬಂಧಿಸಿದಲ್ಲಿ ಪ್ರತಿಷ್ಠಿತರ ಹೆಸರುಗಳು ಹೊರಬರಲಿದೆ ಎಂಬ ಚೈತ್ರಾ ಕುಂದಾಪುರ ಹೇಳಿಕೆಯು ಸಾಕಷ್ಟು ಅನುಮಾನ ಮೂಡಿಸಿತ್ತು. ಇದೀಗ ಸ್ವಾಮೀಜಿ ಬಂಧನವಾಗಿದ್ದು ಪ್ರಕರಣ ಮತ್ತಷ್ಟು ತಿರುವು ಪಡೆದುಕೊಳ್ಳುವ ಸಾಧ್ಯತೆಗಳಿವೆ.