ಸ್ವಾತಂತ್ರ್ಯ ಹೋರಾಟದಲ್ಲೂ ಕಂಡಿದ್ದ ಗಣಪ – ಗಣೇಶೋತ್ಸವ ಆಚರಣೆಯ ಹಿನ್ನೆಲೆ ಇಲ್ಲಿದೆ…

ದೇಶದ ಪ್ರತಿಯೊಂದು ಧರ್ಮದ ಜನರು ಅವರವರ ಧರ್ಮಕ್ಕೆ ಸಂಬಂಧಪಟ್ಟಂತೆ ಹಬ್ಬವನ್ನು ಆಚರಿಸುತ್ತಾರೆ. ಯಾವುದೇ ಹಬ್ಬ ಬಂತೆಂದರೆ ಸಾಕು, ಪ್ರತಿಯೊಬ್ಬರ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ದೇವಸ್ಥಾನಕ್ಕೆ ಹೋಗಿ ಪೂಜೆ ಪುರಸ್ಕಾರಗಳನ್ನು ಪೂರೈಸಿಕೊಂಡು ಬರುತ್ತಾರೆ. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಜನರಿಗೆ ಹಬ್ಬಗಳ ಹಿನ್ನಲೆ, ಇತಿಹಾಸದ ಜ್ಞಾನ ಬಹಳ ಕಡಿಮೆ. ಒಂದು ಹಬ್ಬವನ್ನು ಆಚರಿಸುತ್ತಾರೆ ಎಂದಾಗ ಈ ಹಬ್ಬವನ್ನು ಯಾಕೆ ಆಚರಿಸುತ್ತಾರೆ? ಇದರ ಮಹತ್ವವೇನು? ಎಂಬುದನ್ನು ನಾವು ತಿಳಿದುಕೊಳ್ಳುವುದು ತುಂಬಾ ಅಗತ್ಯವಿದೆ.

ಪ್ರತಿವರ್ಷವೂ ಗಣೇಶ ಚತುರ್ಥಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಆದರೆ ಇದರ ಇತಿಹಾಸ ಬೆರಳೆಣಿಕೆಯಷ್ಟು ಜನರಿಗೆ ತಿಳಿದಿರುವಂತಹದು. ಗಣೇಶನ ಹಬ್ಬ ಬಂತೆಂದರೆ ಸಾಕು ಹಿರಿಯರಿಗೆ ಹೋಲಿಸಿದರೆ ಮಕ್ಕಳಿಗೆ ಬಹಳ ಸಂತಸದ ಕ್ಷಣವದು. ತಮ್ಮದೇ ಕೈ ಛಾಪುವಿನಿಂದ ಮೂಡಿ ಬಂದ ಮಣ್ಣಿನ ಗಣಪತಿಯ ಮೂರ್ತಿಯನ್ನು ಮಾಡಿ ಮನೆಯ ಪಕ್ಕದಲ್ಲಿರುವ ಹಳ್ಳದಲ್ಲಿ ಬಿಟ್ಟು ಸಂಭ್ರಮಿಸುವುದರ ಜೊತೆಗೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದರು. ಆದರೆ ಪ್ರಸ್ತುತ ದಿನಗಳಲ್ಲಿ ಇವೆಲ್ಲವೂ ಮಕ್ಕಳ ಮನಸ್ಸಿಂದ ಮರೆಮಾಚಿ ಹೋಗಿದೆ. ಪೋಷಕರೇ ಇಂತಹ ಒಂದು ಮಕ್ಕಳ ಮನಸ್ಥಿತಿಗೆ ಕಾರಣರಾಗಿದ್ದಾರೆ. ಯಾಕೆಂದರೆ ಮಣ್ಣಿನಲ್ಲಿ ಆಟವಾಡುವಂತಹ ಸಂದರ್ಭದಲ್ಲಿ ಅವರನ್ನು ಗದರಿಸಿ ಮೊಬೈಲ್ ಕೊಟ್ಟು ಮನೆ ಒಳಗೆ ಕೂರಿಸುತ್ತಿದ್ದರು. ಆದರೆ ಅಂದಿನ ಕಾಲದಲ್ಲಿ ಮಣ್ಣಲ್ಲಿ ಆಟವಾಡುತ್ತಿದರು ಕೂಡ ಮಕ್ಕಳ ಆರೋಗ್ಯದಲ್ಲಿ ಯಾವುದೇ ಸಮಸ್ಯೆಗಳು ಬರುತ್ತಿರಲಿಲ್ಲ. ಈಗ ಹಾಗಲ್ಲ ಜನರ ಮನಸ್ಥಿತಿಯ ಜೊತೆಗೆ ಇಡೀ ಜಗತ್ತೇ ಬದಲಾಗಿದೆ ಎಂದು ಹೇಳುವುದಕ್ಕೆ ಪ್ರತ್ಯಕ್ಷ ಸಾಕ್ಷಿಗಳೇ ನಮ್ಮ ಕಣ್ಣೆದುರಲ್ಲಿ ಪ್ರತಿದಿನ ಹರಿದಾಡುತ್ತಿದೆ.

ಗಣೇಶ ಚತುರ್ಥಿಯ ಹಿನ್ನಲೆ:































 
 

ಪಾರ್ವತಿಯ ಪುತ್ರನಾದ ಗಣೇಶ ಅದೃಷ, ಸಮೃದ್ಧಿ ಮತ್ತು ಬುದ್ದಿವಂತಿಕೆಯ ದೇವರು ಎಂದೂ ಭಕ್ತರು ನಂಬಿದ್ದಾರೆ. ಅದಕ್ಕಾಗಿಯೇ ಪವಿತ್ರವಾದ ಸಂದರ್ಭಗಳಲ್ಲಿ ಯಾವುದೇ ವಿಘ್ನ ಬಾರದಂತೆ ಮೊದಲು ಗಣೇಶನನ್ನು   ಸ್ತುತಿಸುತ್ತಾರೆ. ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ ದಿನ ಗಣೇಶ ಚತುರ್ಥಿಯನ್ನು ಆಚರಿಸುತ್ತಾರೆ. ಹೆಚ್ಚಾಗಿ ಬೆಳ್ಳಿ ಅಥವಾ ಮಣ್ಣಿನಿಂದ ಗಣಪತಿಯ ವಿಗ್ರಹವನ್ನು ಮಾಡಿ ವಿದ್ಯುಕ್ತವಾಗಿ ಪೂಜಿಸುತ್ತಾರೆ. ಎಲ್ಲಾ ಪೂಜೆ ಮುಗಿದ ನಂತರದ ದಿನಗಳಲ್ಲಿ ಅನಂತ ಚತುರ್ದಶಿಯ ದಿನದಂದು ಗಣಪತಿಯ ವಿಸರ್ಜನೆಯನ್ನು ಮಾಡುತ್ತಾರೆ.

ಈ ಗಣೇಶೋತ್ಸವ ಹಬ್ಬವನ್ನು ಮೊದಲ ಬಾರಿಗೆ ಜಾರಿಗೆ ತಂದವರು ಸ್ವಾತಂತ್ರ್ಯ ಹೋರಾಟಗಾರರಲ್ಲಿ ಪ್ರಮುಖರಾದ ಬಾಲಗಂಗಾಧರ ತಿಲಕರು. ಭಕ್ತಿ ಹಾಗೂ ಭಾವೈಕ್ಯತೆಯ ಹಿನ್ನಲೆಯಲ್ಲಿ ತಿಲಕರ ಮುಂದಾಳುತ್ವದಲ್ಲಿ ಹುಟ್ಟಿ ಬೆಳೆದ ಗಣೇಶ ಹಬ್ಬವು, ಇಂದು ನಮ್ಮೆಲ್ಲರ ಸಂಭ್ರಮದ ಹಬ್ಬವಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಗಣೇಶನ ಹಬ್ಬ ಕೇವಲ ಕುಟುಂಬದ ಆಚರಣೆಯಾಗಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ಇಡೀ ಸಾರ್ವಜನಿಕರು ಆಚರಿಸುವ ಹಬ್ಬವಾಗಿ ಮಾರ್ಪಾಡುಗೊಂಡಿದೆ. ಬಾಲಗಂಗಾಧರ ತಿಲಕರು ಅವರ ಕೇಸರಿ ಪತ್ರಿಕೆಯಲ್ಲಿ ಸಾರ್ವಜನಿಕ ಗಣೇಶೋತ್ಸವದ ಪರಿಕಲ್ಪನೆ ಕುರಿತು ಬರೆದಿದ್ದರು. 1894ರಲ್ಲಿ ಪುಣೆಯ ಕೇಸರಿ ವಾಡದಲ್ಲಿ ಪ್ರಪ್ರಥಮ ಸಾರ್ವಜನಿಕ ಗಣೇಶೋತ್ಸವವನ್ನು ಆರಂಭಿಸಿದರು. ಅಂತೆಯೇ ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪಿಸಿ 10ನೇ ದಿನ ಎಲ್ಲಾ ವಿಗ್ರಹಗಳನ್ನು ವಿಸರ್ಜನೆ ಮಾಡುವ ಪ್ರಕ್ರಿಯೆಯನ್ನು ತಿಲಕರು ಆರಂಭಿಸಿದರು. ಗಣೇಶ ಚತುರ್ಥಿಯ ಆಚರಣೆಯು ಮರಾಠ ದೊರೆ ಶಿವಾಜಿಯ ಯುಗದ ಹಿಂದಿನದು. ಆದಾಗ್ಯೂ, ಬ್ರಿಟೀಷ್ ರಾಜ್ ಕಾಲದಲ್ಲಿ ಉತ್ಸವವು ಸಾರ್ವಜನಿಕ ರೂಪವನ್ನು ಪಡೆಯಿತು. ಸ್ವಾತಂತ್ರ್ಯ ಹೋರಾಟಗಾರರಾದ ಲೋಕಮಾನ್ಯ ತಿಲಕರು ಈ ಹಬ್ಬದ ಸಾಂಸ್ಕೃತಿಕ ಮಹತ್ವವನ್ನು ಗುರುತಿಸಿದರು ಮತ್ತು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಏಕತೆಯನ್ನು ಪ್ರಚೋದಿಸಲು ಸಾರ್ವಜನಿಕ ಕಾರ್ಯಕ್ರಮವಾಗಿ ಪರಿವರ್ತಿಸುತ್ತಾರೆ.

ಮಹಾರಾಷ್ಟ್ರದಲ್ಲಿ ಗಣೇಶ ಚತುರ್ಥಿಯ ಸಾರ್ವಜನಿಕ ಆಚರಣೆಯು ಬಾಲಗಂಗಾಧರ ತಿಲಕ್ ಅವರ ಯುಗದ ಹಿಂದಿನದು. ಅವರು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಏಕತೆಯನ್ನು ಬೆಳೆಸಲು ಈ ಖಾಸಗಿ ಮನೆಯ ಕಾರ್ಯಕ್ರಮವನ್ನು ಭವ್ಯವಾದ ಸಾರ್ವಜನಿಕ ಹಬ್ಬವನ್ನಾಗಿ ಪರಿವರ್ತಿಸಿದರು. ಇಂದು, ಇದು ಕಲಾತ್ಮಕ ಅಭಿವ್ಯಕ್ತಿಗೆ ವೇದಿಕೆಯಾಗಿ ಕಾರ್ಯನಿರ್ವಹಿಸುವುದರೊಂದಿಗೆ ಸಂಗೀತ ಕಚೇರಿಗಳು, ನೃತ್ಯ ಪ್ರದರ್ಶನಗಳು ಮತ್ತು ಉತ್ಸವದ ಸುತ್ತಲೂ ಕವನ ವಾಚನಗಳಂತಹ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ.

ಗಣೇಶ ಚತುರ್ಥಿ, ಅದರ ರೋಮಾಂಚಕ ಆಚರಣೆಗಳೊಂದಿಗೆ, ಗಣೇಶನಿಗೆ ಗೌರವ ಸಲ್ಲಿಸುವುದು ಮಾತ್ರವಲ್ಲದೆ ಭಾರತದ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಏಕತೆಯನ್ನು ಪ್ರತಿಬಿಂಬಿಸುವಲ್ಲಿ ಪ್ರಮುಖ ಪಾತ್ರವಿದೆ. ವಿನೋದ ಮತ್ತು ಉತ್ಸಾಹದ ಮಧ್ಯೆ, ಹಬ್ಬವು ಪರಿಸರ ಸಂರಕ್ಷಣೆಯಂತಹ ಪ್ರಮುಖ ಸಾಮಾಜಿಕ ಸಮಸ್ಯೆಗಳನ್ನು ಸಹ ಬೆಳಕಿಗೆ ತರುತ್ತದೆ. ಹೀಗಾಗಿ, ಗಣೇಶ ಚತುರ್ಥಿ ಭಕ್ತಿ, ಸಂಸ್ಕೃತಿ ಮತ್ತು ಸಾಮಾಜಿಕ ಜಾಗೃತಿಯ ಸುಂದರ ಹಬ್ಬವಾಗಿದೆ ಮತ್ತು ಭಾರತದಲ್ಲಿ ಅತ್ಯಂತ ನಿರೀಕ್ಷಿತ ಮತ್ತು ವಿಶಾಲವಾಗಿ ಆಚರಿಸಲಾಗುತ್ತದೆ.

ಭಾರತದ ಹೆಚ್ಚಿನ ರಾಜ್ಯಗಳಲ್ಲಿ ಆಚರಣೆಗಳು ಭವ್ಯ ಮತ್ತು ವಿಜೃಂಭಣೆಯಿಂದ ಕೂಡಿದ್ದರೂ ಸಹ,ಕರ್ನಾಟಕ ಮತ್ತು ಮಹಾರಾಷ್ಟ್ರಗಳು ತಮ್ಮ ಗಣೇಶ ಹಬ್ಬಕ್ಕೆ ಇಡೀ ದೇಶಾದ್ಯಂತ ಜನಪ್ರಿಯವಾಗಿವೆ. ಪ್ರತಿ ವರ್ಷ, ಕರ್ನಾಟಕ ಸರ್ಕಾರವು ಬೃಹತ್ ಗಣೇಶ ಮೂರ್ತಿಗಳನ್ನು ವರ್ಣಮಯವಾಗಿ ಅಲಂಕರಿಸಿದ ತಾತ್ಕಾಲಿಕ ಮಂಟಪಗಳಲ್ಲಿ ಸ್ಥಾಪಿಸುತ್ತಾರೆ. ಈ ಅಲಂಕಾರಿಕ ಗಣಪಗಳನ್ನು ಸಾರ್ವಜನಿಕರ ಕಣ್ಮನಗಳನ್ನು ಸೆಳೆಯುತ್ತದೆ. ಚಿಕ್ಕ ಚಿಕ್ಕ ಬಾಳೆ ಸಸಿಗಳು, ಹೂವಿನ ಹಾರಗಳು ಮತ್ತು ನೂರಾರು ದೀಪಗಳಂತಹ ಅಲಂಕಾರಿಕ ವಸ್ತುಗಳಿಂದ ಈ ಮಂಟಪಗಳನ್ನು ಅಲಂಕರಿಸುತ್ತಾರೆ. ಈ ಗಣೇಶ ಹಬ್ಬದ ಸಂದರ್ಭದಲ್ಲಿ ಪ್ರಸ್ತುತ ಘಟನೆಗಳು ಅಥವಾ ಧಾರ್ಮಿಕ ವಿಷಯಗಳನ್ನು ಚಿತ್ರಿಸುವ ಅಲಂಕಾರಗಳನ್ನು ಕೂಡ ನಾವು ನೋಡಿ ಆನಂದಿಸಬಹುದು.

ಕರಾವಳಿ ಪ್ರದೇಶಗಳಲ್ಲಿ ತಮ್ಮದೇ ಆದ ಪರಂಪರೆಯನ್ನು ಹೊಂದಿಕೊಂಡು ಡೊಳ್ಳುಕುಣಿತ, ಹುಲಿವೇಷ, ಯಕ್ಷಗಾನ ಮುಂತಾದವುಗಳಿಂದ ಗಣೇಶ ಚತುರ್ಥಿಗೆ ಮೆರುಗನ್ನು ತುಂಬುತ್ತಾರೆ. ಬ್ರಾಹ್ಮಣ ಮತ್ತು ಬ್ರಾಹ್ಮಣೇತರ ಎಂಬ ಯಾವುದೇ ತಾರತಮ್ಯವಿಲ್ಲದೆ ಎಲ್ಲರನ್ನು ಒಗ್ಗೂಡಿಸುವುದು ಈ ಹಬ್ಬದ ಮೂಲ ಉದ್ದೇಶವಾಗಿದ್ದು ಮನುಷ್ಯರ ನಡುವಿನ ಭಿನ್ನ ಮನಸ್ಥಿತಿಯನ್ನು ಸರಿ ದಾರಿಗೆ ತರುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

  • ನಿರೀಕ್ಷಾ ಗೌಡ

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top