ಬೆಂಗಳೂರು: ಬಹುಕೋಟಿ ವಂಚನೆ ಆರೋಪ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಕೆದಕಿದಷ್ಟು ಬೆಚ್ಚಿ ಬೀಳಿಸುವ ವಿಷಯಗಳು ಹೊರಬರುತ್ತಿವೆ. ಮಾಹಿತಿ ಪ್ರಕಾರ, ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗಲು ಸೂಚಿಸಿ ಹಲವರಿಗೆ ಸಿಸಿಬಿ ನೋಟಿಸ್ ಜಾರಿ ಮಾಡಿದೆ. ಇನ್ನೂ ಕೆಲವರಿಗೆ ವಿಚಾರಣೆಗೆ ಹಾಜರಾಗುವಂತೆ ಪೋನ್ ಮೂಲಕ ಮೌಖಿಕ ಸೂಚನೆ ನೀಡಿದೆ ಎನ್ನಲಾಗಿದೆ.
ಭಜರಂಗದಳ, ವಿಹೆಚ್ಪಿ, ಹಿಂದೂ ಜಾಗರಣೆ ವೇದಿಕೆಯ ಮುಖಂಡರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಹಿಂದುತ್ವ ನಾಯಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಅವದೂತ ವಿನಯ್ ಗುರೂಜಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಆರಂಭದಲ್ಲಿ ಚೈತ್ರಾ ಕುಂದಾಪುರ ಮತ್ತು ಆಕೆಯ ತಂಡದ ಮೂವರು ಸದಸ್ಯರನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದರು. ಬಳಿಕ ಪ್ರಕರಣದಲ್ಲಿ ಹಾಲಸ್ವಾಮಿ ಮಠದ ಹಾಲಶ್ರೀ ಹೆಸರು ಕೇಳಿ ಬಂದಿತ್ತು. ಹಾಲಶ್ರೀಯನ್ನು ಬಂಧಿಸಿದರೆ ಸತ್ಯ ಹೊರ ಬರಲಿದೆ ಎಂದು ಸ್ವತಃ ಚೈತ್ರಾ ಕುಂದಾಪುರ ಹೇಳಿದ್ದರು. ಯುವ ಬ್ರಿಗೇಡ್ ಮುಖ್ಯಸ್ಥ, ಹಿಂದುತ್ವ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಮತ್ತು ಮಂಗಳೂರಿನ ವಜ್ರದೇಹಿ ಮಠದ ಸ್ವಾಮಿಯ ಹೆಸರು ಕೂಡ ಪ್ರಕರಣದಲ್ಲಿ ತಳುಕು ಹಾಕಿಕೊಂಡಿದೆ.
ಈ ನಡುವೆ ವಿನಯ್ ಗುರೂಜಿ ಮತ್ತು ಹಿಂದುತ್ವ ಸಂಘಟನೆಗಳಿಗೆ ಸಿಸಿಬಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿರುವುದನ್ನು ನೋಡಿದರೆ ಪ್ರಕರಣ ಹಿಂದೆ ಚೈತ್ರಾ ಮತ್ತು ಆಕೆಯ ತಂಡ ಮಾತ್ರವಲ್ಲದೆ ದೊಡ್ಡದೊಂದು ಜಾಲವೇ ಇದೆ ಎಂಬ ಸುಳಿವು ನೀಡಿದೆ.