ಉಪ್ಪಿನಂಗಡಿ: ಸಂಪಾದನೆಯ ನಿರ್ದಿಷ್ಟ ಭಾಗವನ್ನು ಸಮಾಜ ಸೇವಾ ಕಾರ್ಯಗಳಿಗೆ ವಿನಿಯೋಗಿಸಿ ಸಮಸ್ಯೆಗಳಿಗೆ ಸ್ಪಂದಿಸುವುದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ ಎಂದು ನಿವೃತ್ತ ಬಿಎಸ್ಎಫ್ ಕಮಾಂಡೆಂಟ್ ಡಿ.ಚಂದಪ್ಪ ಮೂಲ್ಯ ಹೇಳಿದರು.
ಉಪ್ಪಿನಂಗಡಿ ರಾಮನಗರದ ಶ್ರೀ ಶಾರದಾ ಕಲಾ ಮಂಟಪದಲ್ಲಿ ಜರಗಿದ ಮೆಲ್ಕಾರ್ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಬಂಟ್ವಾಳ ಇದರ ಕೇಂದ್ರ ಸಮಿತಿಯ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸೇನಾ ಪಡೆಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಕೆಲವು ರೋಚಕ ಘಟನೆಗಳ ಬಗ್ಗೆ ಮಾತನಾಡುತ್ತಾ, ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಮಾಜಿ ಟ್ರಸ್ಟಿ ಜಿ. ಕೃಷ್ಣರಾವ್ ಅರ್ತಿಲ, ಹಿರಿಯರು ಸಕ್ರೀಯರಾಗುವಂತೆ ಮಾಡುವಲ್ಲಿ ಪ್ರತಿಷ್ಠಾನವು ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಕೆಯ್ಯೂರು ನಾರಾಯಣ ಭಟ್ ಅವರು ಪ್ರತಿಷ್ಠಾನದ ಕಾರ್ಯಗಳ ಅವಲೋಕನ ಮಾಡಿ, ಮುಂದಿನ ಯೋಜನೆಗಳ ಬಗ್ಗೆ ತಿಳಿಸಿದರು.
ಪ್ರತಿಷ್ಠಾನದ ಉಪಾಧ್ಯಕ್ಷ ಜಯರಾಮ ಭಂಡಾರಿ ಧರ್ಮಸ್ಥಳ, ಯಕ್ಷಗಾನ ಕಲಾವಿದ ಪಾತಾಳ ಅಂಬಾ ಪ್ರಸಾದ್, ಪ್ರತಿಷ್ಠಾನದ ಪುತ್ತೂರು ಘಟಕದ ಸಂಚಾಲಕ ಉಮೇಶ್ ಶೆಣೈ ನಂದಾವರ ಉಪಸ್ಥಿತರಿದ್ದರು.
ಹಿರಿಯರು ಅರ್ಹವಾಗಿ ಪಡೆಯಬೇಕಾದ ಆರೋಗ್ಯ, ರೈಲ್ವೇ ಪ್ರಯಾಣ, ಕೃಷಿ ಬೆಳವಿಮೆ, ಹಿರಿಯರ ಸುರಕ್ಷತೆಯ ಬಗ್ಗೆ ಕಾನೂನು ಮಾಹಿತಿ ನೀಡುವ ಬಗ್ಗೆ ಬಗ್ಗೆ ವಿವಿಧ ತಾಲೂಕು ಘಟಕಗಳ ಪದಾಧಿಕಾರಿಗಳಾದ ಭವಾನಿ ಶಂಕರ ಶೆಟ್ಟಿ ಪುತ್ತೂರು, ಸೀತಾರಾಮ ಶೆಟ್ಟಿ ಕಾಂತಡಿ ಗುತ್ತು, ಕೆದಿಮಾರು ಶಂಕರ ಭಟ್, ಚಂದ್ರಶೇಖರ ಆಳ್ವ ಪಡುಮಲೆ, ಕೃಷ್ಣಶರ್ಮ ಆನಾರು, ಮಹಾಲಿಂಗೇಶ್ವರ ಭಟ್ ಪೆರಿಯಡ್ಕ, ಗೋಪಾಲ ಶೆಟ್ಟಿ ಕಳೆಂಜ, ಎ. ಸಂಜೀವ ಪಾರೆಂಕಿ, ಸುರೇಶ ರಾವ್ ಬನ್ನೆಂಗಳ ಸಲಹೆ ನೀಡಿದರು.
ರಾಮಕೃಷ್ಣ ನಾಯಕ್ ಮಂಚಿ ಪ್ರಾರ್ಥಿಸಿದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಸ್ವಾಗತಿಸಿ, ಉಪಾಧ್ಯಕ್ಷ ಲೋಕೇಶ್ ಹೆಗ್ಡೆ ಪುತ್ತೂರು ವಂದಿಸಿದರು. ಉಪಾಧ್ಯಕ್ಷ ದುಗ್ಗಪ್ಪ ಎನ್. ಕಾರ್ಯಕ್ರಮ ನಿರೂಪಿಸಿದರು.