ಪುತ್ತೂರು: ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕದಿರು ವಿನಿಯೋಗ-ವಿತರಣೆ ಕಾರ್ಯಕ್ರಮ ಸೋಮವಾರವೂ ಮುಂದುವರಿಯಿತು.
ದೇವಸ್ಥಾನದ ಪುಷ್ಕರಣಿ ಬಳಿ ಇರುವ ಅಶ್ವತ್ಥ ಕಟ್ಟೆಯಲ್ಲಿ ಕದಿರಿಗೆ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ದೇವರ ಉತ್ಸವ ಬಲಿಯೊಂದಿಗೆ ಕದಿರನ್ನು ದೇವಸ್ಥಾನದ ಒಳಾಂಗಣಕ್ಕೆ ತಂದು ಪೂಜೆ ಸಲ್ಲಿಸಲಾಯಿತು. ಬಳಿಕ ಕದಿರನ್ನು ಹೊರಾಂಗಣದಲ್ಲಿ ಸರತಿ ಸಾಲಿನಲ್ಲಿ ನಿಂತ ಭಕ್ತರಿಗೆ ವಿತರಿಸಲಾಯಿತು.
ದೇವಸ್ಥಾನದ ಗರ್ಭಗುಡಿ, ಗೋಪುರ, ರಥ, ಕಟ್ಟೆಗಳಿಗೆ ಕದಿರು ಕಟ್ಟುವ ಸಂಪ್ರದಾಯ ನಡೆದ ಬಳಿಕ ಮಧ್ಯಾಹ್ನ ಶ್ರೀ ದೇವರಿಗೆ ಹೊಸ ಅಕ್ಕಿ ನೈವೇದ್ಯ ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಸದಸ್ಯರಾದ ರವೀಂದ್ರನಾಥ ರೈ ಬಳ್ಳಮಜಲು, ರಾಮದಾಸ್ ಗೌಡ, ಬಿ. ಐತ್ತಪ್ಪ ನಾಯ್ಕ್, ಶೇಖರ್ ನಾರಾವಿ, ರಾಮಚಂದ್ರ ಕಾಮತ್, ಡಾ. ಸುಧಾ ಎಸ್. ರಾವ್, ಭಕ್ತಾದಿಗಳು ಉಪಸ್ಥಿತರಿದ್ದರು.