ಮಂಗಳೂರು: ಆಟೋರಿಕ್ಷಾವೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ, ಮದುವೆ ನಿಶ್ಚಿತಾರ್ಥವಾಗಿದ್ದ ಯುವತಿಯೋರ್ವಳು ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುಪುರದ ಬಂಗ್ಲೆಗುಡ್ಡೆ ಸಮೀಪ ನಡೆದಿದೆ.
ಯುವತಿ ಅರ್ಕುಳ ತುಪ್ಪೆಕಲ್ಲು ನಿವಾಸಿ ಪ್ರೀತಿ ಸಪಲಿಗ (25) ಮೃತಪಟ್ಟವರು. ಪ್ರೀತಿ ಅವರ ತಾಯಿ ಮೀನಾಕ್ಷಿ (55), ತಂಗಿ ಸ್ವಾತಿ (23), ಅತ್ತಿಗೆ ಶೋಭಾ (37), ಶೋಭಾ ಅವರ ಪುತ್ರ ಭವಿಷ್ (9), ಆಟೋ ಚಾಲಕ ಪದ್ಮನಾಭ ಗಾಯಗೊಂಡಿದ್ದಾರೆ.
ಮೃತ ಯುವತಿಗೆ ವಿವಾಹ ನಿಶ್ಚಿತಾರ್ಥವಾಗಿದ್ದು, ಮುಂದಿನ ವರ್ಷ ಜ. 4ರಂದು ಮದುವೆಗೆ ದಿನ ನಿಗದಿಯಾಗಿತ್ತು.
ಗುರುಪುರದ ಬಂಗ್ಲೆಗುಡ್ಡೆಯಿಂದ ಗುರುಪುರ ಪೇಟೆಗೆ ಬರುವ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಆಟೋರಿಕ್ಷಾ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಕುಟುಂಬ ಅದ್ಯಪಾಡಿ ದೇವಸ್ಥಾನಕ್ಕೆ ತೆರಳಿ ಹಿಂದಿರುಗುತ್ತಿತ್ತು ಎಂದು ಹೇಳಲಾಗಿದೆ. ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.