ಪುತ್ತೂರು: ವಿಶ್ವಕರ್ಮ ಜಯಂತಿ ಅಂಗವಾಗಿ ವಿಶ್ವಕರ್ಮ ದೇವರ ಅಲಂಕೃತ ವಾಹನ ಮೆರವಣಿಗೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಚಾಲನೆ ನೀಡಲಾಯಿತು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಚಾಲನೆ ನೀಡಿದರು. ಬಳಿಕ ಪುತ್ತೂರು ಪೇಟೆಯ ಮುಖ್ಯರಸ್ತೆಯಿಂದಾಗಿ ಸಾಗಿದ ವಿಶ್ವಕರ್ಮ ದೇವರ ಅಲಂಕೃತ ವಾಹನ ಮೆರವಣಿಗೆ ಬೊಳುವಾರು ವಿಶ್ವಕರ್ಮ ಸಭಾಭವನದವರೆಗೆ ಸಾಗಿತು.
ಮೆರವಣಿಗೆಯಲ್ಲಿ ಚೆಂಡೆ, ಕುಣಿತ ಭಜನೆ, ವಿಶ್ವಕರ್ಮ ದೇವರ ಸ್ತಬ್ದಚಿತ್ರ ಗಮನ ಸೆಳೆಯಿತು. ಇದನ್ನನುಸರಿಸಿ ವಿಶ್ವಕರ್ಮ ಸಮುದಾಯದವರು ಮೆರವಣಿಗೆಯಲ್ಲಿ ಸಾಗಿಬಂದರು.
ವಿಶ್ವಕರ್ಮ ಸಮಾಜದ ವಿವಿಧ ಸಂಘಟನೆಗಳಾದ ಬೊಳುವಾರು ವಿಶ್ವಬ್ರಾಹ್ಮಣ ಸೇವಾ ಸಂಘ, ವಿಶ್ವಕರ್ಮ ಯುವ ಸಮಾಜ, ದ.ಕ. ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘ ಪುತ್ತೂರು, ಪುತ್ತೂರು ವಿಧಾನಸಭಾ ಕ್ಷೇತ್ರದ ಶ್ರೀ ಆನೆಗೊಂದಿ ಗುರು ಸೇವಾ ಪರಿಷತ್ತಿನ ಪುತ್ತೂರು ವಲಯ, ಪುತ್ತೂರು ವಿಶ್ವಕರ್ಮ ಯುವ ಮಿಲನ್, ಪಂಚಮುಖಿ ಗೆಳೆಯರ ಬಳಗ ಕೋರ್ಟ್ ರಸ್ತೆ ಪುತ್ತೂರು, ವಿಶ್ವಕರ್ಮ ಮಹಿಳಾ ಮಂಡಳಿ, ಬೀರಮಲೆ ವಿಶ್ವಕರ್ಮ ಸೇವಾ ಸಂಘ, ಬೀರಮಲೆ ಗಾಯತ್ರಿ ಮಹಿಳಾ ಮಂಡಳಿ, ಉಪ್ಪಿನಂಗಡಿ ವಿಶ್ವಕರ್ಮ ಸೇವಾ ಸಂಘ, ಬೊಳುವಾರು ಭಾವನಾ ಕಲಾ ಆರ್ಟ್ಸ್, ಬೀರಮಲೆ ವಿಶ್ವಕರ್ಮ ಯುವಕ ಸಂಘ, ಉಪ್ಪಿನಂಗಡಿ ಕಾಳಿಕಾಂಬಾ ಮಹಿಳಾ ಸಂಘ, ದ.ಕ. ಜಿಲ್ಲಾ ಕಬ್ಬಿಣ ಕೆಲಸಗಾರರ ಸಂಘ ಸಹಕರಿಸಿತು.