ದೇಶದ ಬೆನ್ನೆಲುಬಾದ ರೈತರಿಗೆ ಬೆನ್ನೆಲುಬು ವಿಶ್ವಕರ್ಮರು | ಬೊಳುವಾರಿನಲ್ಲಿ ನಡೆದ ವಿಶ್ವಕರ್ಮ ಮಹೋತ್ಸವದಲ್ಲಿ ಶಿವಾನಂದ ಆಚಾರ್ಯ | ವಿದ್ಯಾರ್ಥಿವೇತನ ವಿತರಣೆ, ಪ್ರತಿಭಾ ಪುರಸ್ಕಾರ, ಸನ್ಮಾನ

ಪುತ್ತೂರು: ಜಾತಿ ವಿಂಗಡಣೆಯಲ್ಲಿ 1216 ಜಾತಿಗಳನ್ನು ಗುರುತಿಸಲಾಗಿದೆ. ಅದರಲ್ಲಿ ದೇವರ ಹೆಸರಿನಿಂದ ಗುರುತಿಸುವ ಏಕೈಕ ಜಾತಿ ವಿಶ್ವಕರ್ಮ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ, ಉಪವಲಯ ಅರಣ್ಯಾಧಿಕಾರಿ ಶಿವಾನಂದ ಆಚಾರ್ಯ ಹೇಳಿದರು.

ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಭಾನುವಾರ ವಿಶ್ವಕರ್ಮ ಯುವ ಸಮಾಜ ಹಾಗೂ ವಿಶ್ವಬ್ರಾಹ್ಮಣ ಸೇವಾ ಸಂಘದ ಆಶ್ರಯದಲ್ಲಿ ವಿಶ್ವಕರ್ಮ ಪೂಜೆ ಹಿನ್ನೆಲೆಯಲ್ಲಿ ನಡೆದ ವಿದ್ಯಾರ್ಥಿವೇತನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ದೇವಾನುದೇವತೆಗಳಿಗೆ ಆಯುಧಗಳನ್ನು ಸೃಷ್ಟಿಸಿಕೊಟ್ಟವ ವಿಶ್ವಕರ್ಮ. ದೇವರ ಲೋಕಗಳನ್ನು ಸೃಷ್ಟಿಸಿಕೊಟ್ಟವ ವಿಶ್ವಕರ್ಮ. ಬೇಲೂರು, ಹಳೆಬೀಡಿನಂತಹ ಜೀವಂತಿಕೆಯ ಶಿಲ್ಪಗಳನ್ನು ನೀಡಿದವರು ವಿಶ್ವಕರ್ಮರು. ಈ ದೇಶದ ಬೆನ್ನೆಲುಬಾದ ರೈತರಿಗೇ ಕತ್ತಿ, ನೇಗಿಲು ನಿರ್ಮಿಸಿಕೊಟ್ಟು ಅವರಿಗೇ ಬೆನ್ನೆಲುಬಾಗಿ ನಿಂತವರು ವಿಶ್ವಕರ್ಮರು. ಹೀಗೆ ಎಲ್ಲರಿಗೂ ಬೇಕಾದವರು ವಿಶ್ವಕರ್ಮರು. ಆದರೆ ಹೀಗೆ ಎಲ್ಲರಿಗೂ ಬೇಕಾದವರು, ತುಳಿತಕ್ಕೆ ಒಳಗಾಗಿದ್ದಾರೆ. ಸಮಾಜದ ಮೇಲು ಸ್ತರದಲ್ಲಿ ಇರಬೇಕಾಗಿದ್ದ ಜಾತಿ, ಇಂದು ಕೆಳಭಾಗದಲ್ಲಿದೆ. ಸಮಾಜದಲ್ಲಿ ಒಬ್ಬ ರಾಜಕೀಯ ನಾಯಕರಿಲ್ಲ. ಸಾಮಾಜಿಕವಾಗಿಯೂ ಹಿಂದುಳಿದಿದ್ದೇವೆ ಎಂದರು.































 
 

ವಿಶ್ವಕರ್ಮ ಸಮುದಾಯ ಹಿಂದುಳಿದ ಕಾರಣ ನಾನಾ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಸಾಮಾಜಿಕ, ರಾಜಕೀಯ ನಾಯಕರು ಇಲ್ಲದೇ ಇರುವುದು ಸಮಾಜಕ್ಕೆ ದೊಡ್ಡ ಕೊರತೆಯಾಗಿ ಕಾಡುತ್ತಿದೆ. ಆದ್ದರಿಂದ ಎಳವೆಯಲ್ಲೇ ಮಕ್ಕಳಿಗೆ ನಾಯಕತ್ವದ ಗುಣಗಳನ್ನು ಕಲಿಸಿಕೊಡಿ. ಮಕ್ಕಳಲ್ಲಿ ನಾಯಕತ್ವದ ಗುಣಗಳು ಬೆಳೆದರೆ, ಸಮುದಾಯ – ಸಮಾಜದಲ್ಲಿ ಬರುವ ಎಲ್ಲಾ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳಬಹುದು. ಒಟ್ಟಿನಲ್ಲಿ ಸಮುದಾಯದ ಮುಂದೆ ಬಂದಿರುವ ಸಮಸ್ಯೆಗಳ ಪರಿಹಾರಕ್ಕೆ ಸಂಘಟನಾತ್ಮಕ ಹೋರಾಟ ಅಗತ್ಯ. ಆಗ ಎಂತಹ ಸಮಸ್ಯೆಯನ್ನಾದರೂ ಬಗೆಹರಿಸಿಕೊಂಡು ಮುಂದೆ ಹೋಗಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಶ್ವಕರ್ಮ ಯುವ ಸಮಾಜದ ಅಧ್ಯಕ್ಷ ಪ್ರಕಾಶ ಆಚಾರ್ಯ ಕೆ. ಮಾತನಾಡಿ, ಸಮಾಜ ಸಂಘಟಿತವಾಗಲು ಕರೆ ನೀಡಿದರು.

ವಿಶ್ವಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಶ್ರೀಧರ ಆಚಾರ್ಯ ಕೊಕ್ಕಡ ಮಾತನಾಡಿ, ಭಾರತೀಯ ಸಂಸ್ಕೃತಿಯನ್ನು ಉಳಿಸುವಲ್ಲಿ ವಿಶ್ವಕರ್ಮ ಸಮಾಜದ ಪಾತ್ರವೂ ಇದೆ. ಆದ್ದರಿಂದ ಎಲ್ಲರೂ ಒಗ್ಗಟ್ಟಾಗಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು ಎಂದ ಅವರು, ವಿಶ್ವಕರ್ಮ ಪೂಜೆಯ ದಿನವನ್ನು ಮಹೋತ್ಸವವಾಗಿ ಆಚರಿಸಬೇಕೆಂಬ ಸಂಕಲ್ಪ ಮಾಡಿದ್ದೇವು. ಮಹೋತ್ಸವಕ್ಕೆ ನಿರೀಕ್ಷೆಗೂ ಮೀರಿ ಅದ್ಭುತ ಪ್ರೋತ್ಸಾಹ ಸಿಕ್ಕಿದೆ ಎಂದರು.

ವಿಶ್ವಕರ್ಮ ಮಹಿಳಾ ಮಂಡಳಿ ಅಧ್ಯಕ್ಷೆ ಇಂದಿರಾ ಪುರುಷೋತ್ತಮ ಆಚಾರ್ಯ ಉಪಸ್ಥಿತರಿದ್ದರು. ವಿಶ್ವಬ್ರಾಹ್ಮಣ ಸೇವಾ ಸಂಘದ ಕಾರ್ಯದರ್ಶಿ ಆನಂದ ಆಚಾರ್ಯ ಅಜ್ಜಿನಡ್ಕ ಹಾಗೂ ನಿಕಟಪೂರ್ವ ಅಧ್ಯಕ್ಷ ಸುರೇಶ್ ಆಚಾರ್ಯ ಕಾಣಿಯೂರು ವಿದ್ಯಾರ್ಥಿವೇತನ ಕಾರ್ಯಕ್ರಮ ನಿರ್ವಹಿಸಿದರು. ವಿಶ್ವಬ್ರಾಹ್ಮಣ ಸೇವಾ ಸಂಘದ ಉಪಾಧ್ಯಕ್ಷ ಭುಜಂಗ ಆಚಾರ್ಯ ಅವರು ಅತಿಥಿಗಳನ್ನು ಪರಿಚಯಿಸಿದರು‌.

ವಿಶ್ವ ಬ್ರಾಹ್ಮಣ ಸೇವಾ ಸಂಘದ ನಿಕಟಪೂರ್ವ ಅಧ್ಯಕ್ಷ ಎಸ್ ಎನ್ ಜಗದೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ವಿಶ್ವಕರ್ಮ ಯುವ ಸಮಾಜದ ಕಾರ್ಯದರ್ಶಿ ಜಗದೀಶ್ ವಂದಿಸಿದರು. ಕಿಶನ್ ಬಿ.ವಿ. ಕಾರ್ಯಕ್ರಮ ನಿರೂಪಿಸಿದರು.

ಮಠಂದೂರಿಗೆ ಸನ್ಮಾನ; ಪುತ್ತಿಲ, ಶಕುಂತಳಾ ಶೆಟ್ಟಿಗೆ ಗೌರವ

ವಿಶ್ವಕರ್ಮ ಸಭಾಭವನದ ಪಾಕಶಾಲೆಗೆ ರೂ. 5 ಲಕ್ಷ ಅನುದಾನ ನೀಡಿದ್ದ ಮಾಜಿ ಶಾಸಕ ಸಂಜೀವ ಮಠಂದೂರು ಅವರನ್ನು ಸನ್ಮಾನಿಸಲಾಯಿತು. ಸಮಾರಂಭಕ್ಕೆ ಭೇಟಿ ನೀಡಿದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹಾಗೂ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರಿಗೆ ವಿಶ್ವಕರ್ಮ ಪೂಜೆಯ ಪ್ರಸಾದ ನೀಡಿ, ವೇದಿಕೆಯಲ್ಲಿ ಗೌರವಿಸಲಾಯಿತು. 27 ವರ್ಷಗಳ ಕಾಲ ಸಭಾಭವನದ ಮ್ಯಾನೇಜರ್ ಆಗಿದ್ದ ಕೃಷ್ಣ ಮಣಿಯಾಣಿ ಅವರನ್ನು ಸನ್ಮಾನಿಸಲಾಯಿತು. ನಗರಸಭೆ ಉಪಾಧ್ಯಕ್ಷರಾಗಿದ್ದ ವಿದ್ಯಾ ಆರ್. ಗೌರಿ ಹಾಗೂ ಸುಳ್ಯ ಸಮಾಜ ಕಲ್ಯಾಣ ವಿಸ್ತರಣಾಧಿಕಾರಿ ಗೀತಾ  ಅವರನ್ನು ಗೌರವಿಸಲಾಯಿತು.

ದೇವಶಿಲ್ಪಿ ವಿಶ್ವಕರ್ಮ ಯಕ್ಷಗಾನ

ಸಭಾ ಕಾರ್ಯಕ್ರಮದ ಬಳಿಕ ದ.ಕ. ಶ್ರೀ ವಿಶ್ವಕರ್ಮ ಸಂಸ್ಕೃತಿ ಪ್ರಸಾರ ಪ್ರತಿಷ್ಠಾನದ ವತಿಯಿಂದ ದೇವಶಿಲ್ಪಿ ವಿಶ್ವಕರ್ಮ ಯಕ್ಷಗಾನ ನಡೆಯಿತು. ಭಾಗವತರಾಗಿ ಡಿ.ಕೆ. ಆಚಾರ್ಯ ಆಲಂಕಾರು ಹಾಗೂ ಶಿವ ಪ್ರಸಾದ್ ಆಚಾರ್ಯ ಸಹಕರಿಸಿದರು. ಮೃದಂಗದಲ್ಲಿ ಶ್ರಾವ್ಯ ತಳಕಲ, ಚೆಂಡೆಯಲ್ಲಿ ಸಮರ್ಥ್ ಉಡುಪ ಕತ್ತಲ್’ಸಾರ್, ಚಕ್ರತಾಳದಲ್ಲಿ ಶಮ ತಳಕಲ ಸಹಕರಿಸಿದರು. ಮುಮ್ಮೇಳದಲ್ಲಿ ಸತೀಶ್ ಆಚಾರ್ಯ ಮಾಣಿ, ದಿವಾಕರ ಆಚಾರ್ಯ ಗೇರುಕಟ್ಟೆ, ನಾಗರಾಜ ಆಚಾರ್ಯ ಉದ್ಯಾವರ, ಶ್ರೇಯ ಆಲಂಕಾರು, ಶುಶಾಂತ್ ಕೈಕಂಬ, ಯಶಸ್ ಆಚಾರ್ಯ ಆಲಂಕಾರು, ಪ್ರಜ್ಞಾ ಉಪ್ಪಿನಂಗಡಿ, ದಿವ್ಯ ಮಾಣಿ, ಬಿಂದು ಅನಂತಾಡಿ, ಮನಿಷ ಅನಂತಾಡಿ, ಅಭಿಜ್ಞಾ ಮಾಣಿ ಸಹಕರಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top